ಬೆಂಗಳೂರು: ಎಪ್ಪತ್ತು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ನಾಗರಿಕರಿಗೆ ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆ (ಎಬಿ-ಎಆರ್‌ಕೆ) ಅಡಿ ಚಿಕಿತ್ಸೆ ಒದಗಿಸಲು ಸರ್ಕಾರ ಅನುಮೋದನೆ ನೀಡಿದ್ದು, ವಯೋವಂದನಾ ಕಾರ್ಡ್ ಕಡ್ಡಾಯಗೊಳಿಸಿದೆ. ಅರ್ಹ ಲಾನುಭವಿಗಳು ಆಧಾರ್ ಕಾರ್ಡ್ ಮತ್ತು ಪಿಎಚ್‌ಎಚ್ ರೇಷನ್ ಕಾರ್ಡ್ ಬಳಸಿ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದರಡಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಹೆಚ್ಚುವರಿ ಚಿಕಿತ್ಸೆ ಪಡೆಯಬಹುದು. ಅಲ್ಲದೆ, ಹಿರಿಯ ನಾಗರಿಕರು 5 ಲಕ್ಷ ರೂ. ಮೂಲ ಕುಟುಂಬದ ವ್ಯಾಲೆಟ್ ಅನ್ನು ಪೂರ್ಣವಾಗಿ ಅಥವಾ ಭಾಗಶಃ ಬಳಸಿದ್ದರೆ ಕುಟುಂಬದ ಇತರ ಸದಸ್ಯರಿಗೆ 5 ಲಕ್ಷ ರೂ. ವರೆಗೆ ಟಾಪ್ ಅಪ್ ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಯೋಜನೆ ಪ್ರಯೋಜನ ಪಡೆಯಲು ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಭಾಗಶಃ ಅಥವಾ ಸಂಪೂರ್ಣವಾಗಿ ಹಣಕಾಸು ಪಡೆದ ಯಾವುದೇ ಯೋಜನೆಯಲ್ಲಿ ಉಚಿತ ಆರೋಗ್ಯ ಸೇವೆ ಪಡೆಯುತ್ತಿಲ್ಲ ಎಂದು ಫಲಾನುಭವಿ ಘೋಷಿಸಬೇಕು. ಹೊಸದಾಗಿ 70 ವರ್ಷ ಪೂರೈಸಿರುವವರು ವರ್ಷದ ಯಾವುದೇ ಸಮಯದಲ್ಲೂ ವಯೋವಂದನಾ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ beneficiary.nha.gov.in ಪ್ರತ್ಯೇಕ ಮಾಡ್ಯೂಲ್ ಅಡಿ ಅರ್ಜಿ ಸಲ್ಲಿಸಬಹುದು.