ಹುಬ್ಬಳ್ಳಿ: ಈ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನವು ಮಣಿಕಂಠ ಗೊದಮನಿ ಅವರ ನೇಣು ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ.
ಈ ಕಥೆಯು ಸಮಾಜದಾಳದಲ್ಲಿ ಇನ್ನೂ ಲಾವಾರಸದಂತೆ ಕುದಿಯುತ್ತಲೇ ಇರುವ ಜಾತೀಯತೆಯ ಭ್ರಷ್ಟ ವ್ಯವಸ್ಥೆಯು ತೀವ್ರ ಭಾವಪೂರ್ಣ ಕಥನವಾಗಿ ಸಹೃದಯರನ್ನು ಪರಿಣಾಮಕಾರಿಯಾಗಿ ತಟ್ಟುವುದರ ಮೂಲಕ ಯಶಸ್ವಿಯಾಗಿದೆ ಎಂದು ಸ್ಪರ್ಧೆಯ ತೀರ್ಪುಗಾರರಾದ ಮಹಾಂತಪ್ಪ ನಂದೂರ ಹಾಗೂ ಡಾ. ರಂಗನಾಥ ಕಂಟನಕುಂಟೆ ಅಭಿಪ್ರಾಯಪಟ್ಟಿದ್ದಾರೆ.
ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಅರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆವ ಸತತ ಎಂಟನೇ ವರ್ಷದ ಸ್ಪರ್ಧೆಯಿದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ ತಿಂಗಳಲ್ಲಿ ನೆರವೇರಿಸಲಾಗುವುದು ಎಂದು ಅರ ಸಾಹಿತ್ಯ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಕಥೆಗಾರನ ಪರಿಚಯ: ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ-2025 ಪಡೆದ ಮಣಿಕಂಠ ಗೊದಮನಿ ಪ್ರಸ್ತುತ ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಬಿ.ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, 2021ರಲ್ಲಿ ಹೊರಬಂದ ಇವರ ಉರಿದೊಡಲ ಬೇಗೆ ಕವನ ಸಂಕಲನಕ್ಕೆ ವಿದ್ಯಾಸಾಗರ ಬಾಲ ಪುರಸ್ಕಾರ ದೊರೆತಿದೆ. ಸುರಗಿ ಪ್ರತಿಷ್ಠಾನ ಕವನ ಸ್ಪರ್ಧೆಯಲ್ಲೂ ಬಹುಮಾನಿತರಾಗಿದ್ದಾರೆ.