ಜಿಲ್ಲೆ

ಗಾಂಧಿಯನ್ನು ಮತ್ತೆ ಗ್ರಹಿಸಿಕೊಳ್ಳಬೇಕಿದೆ: ಸಾಹಿತಿ ಚಲಂ ಹಾಡ್ಲಹಳ್ಳಿ ಅಭಿಪ್ರಾಯ

ಹಾಸನ: ಮಹಾತ್ಮ ಗಾಂಧಿಯವರು ಪಾಲಿಸಿದ ತತ್ವ, ಆದರ್ಶಗಳನ್ನು ನೂರು ವರ್ಷಗಳ ನಂತರ ಈಗ ಮತ್ತೆ ಭಿನ್ನವಾಗಿ ಗ್ರಹಿಸಬೇಕಿದೆ ಎಂದು ಸಾಹಿತಿ ಚಲಂ ಹಾಡ್ಲಹಳ್ಳಿ ಅಭಿಪ್ರಾಯಪಟ್ಟರು.

ಹಾಸನ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಮೂವತ್ತೊಂಬತ್ತನೆಯ ಕಾಂಗ್ರೆಸ್ ಸಮಾವೇಶದ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಕರ್ನಾಟಕದ ಬೆಳಗಾವಿಗೆ ಬಂದು ಮೂರು ದಿನಗಳ ಕಾಲ ಇದ್ದು ನಮಗೆ ಆಗ್ರಹಿಸಿದ ಸಂಗತಿಗಳು ನೂರು ವರ್ಷ ಕಳೆದರೂ ಹಾಗೆಯೇ ಇವೆ. ಕೋಮು ಸೌಹಾರ್ದ, ಅಸ್ಪಶ್ಯತಾ ನಿವಾರಣೆ, ಪ್ರಾದೇಶಿಕ ಪ್ರಾತಿನಿಧಿಕತೆ ಮುಂತಾದ ಸಂಗತಿಗಳು ಈಗಲೂ ನಮ್ಮನ್ನು ಬಾಧಿಸುತ್ತಿವೆ. ಗಾಂಧಿಯವರು ಅಂದು ಹೇಳಿದ ವಿಚಾರಗಳು ಸೂಕ್ತವೇ ಆಗಿದ್ದರೂ ಕೂಡ ವ್ಯಕ್ತಿ ಕೇಂದ್ರಿತ ಅಭಿಪ್ರಾಯಗಳಾಗಿದ್ದವು. ಗಾಂಧಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಸಾಕಷ್ಟು ಪ್ರಜಾಸತ್ತಾತ್ಮಕವಾಗಿ ಇರದಿದ್ದುದು ಒಂದು ಕಾರಣ ಎಂದು ಹೇಳಿದರು.

ಗಾಂಧಿ ಅನುಸರಿಸಿದ ಮಾರ್ಗವನ್ನು ನಾವು ಈ ಕಾಲಕ್ಕೆ ಪರಿಷ್ಕರಿಸಿಯಾದರೂ ಒಳಗೊಳ್ಳುವುದು ಸಾಧ್ಯವಿಲ್ಲ. ಅಂತಹ ವಾತಾವರಣಕ್ಕೆ ಗಾಂಧಿ ನೂರು ವರ್ಷಗಳ ಹಿಂದೆಯೇ ಶಕ್ತವಾದ ಅಡಿಪಾಯ ಹಾಕಬೇಕಿತ್ತು. ಇದೆಲ್ಲದರ ನಡುವೆಯೂ ಗಾಂಧಿ ಹೇಳಿದ ಸತ್ಯದ ಮಾರ್ಗ, ಅಹಿಂಸೆ ಮಾರ್ಗ, ಸ್ವಾಭಿಮಾನದ ಮಾರ್ಗಗಳು ಇಂದಿಗೂ ನಮಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಬೇಕಾದುದಾಗಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಮಧುವನ ಶಂಕರ್ ಮಾತನಾಡಿ, ಗಾಂಧಿಯವರ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಬೇಕಂತಲೇ ಬಿತ್ತಲಾಗುತ್ತಿದೆ. ಗಾಂಧಿಯವರ ಪಾತ್ರವನ್ನು ನಾವು ಯಾವ ಕಾರಣಕ್ಕೂ ಉಪೇಕ್ಷೆ ಮಾಡುವಂತಿಲ್ಲ. ಗಾಂಧಿ ಆ ಸಮಯಕ್ಕೆ ಪ್ರಕೃತಿ ನಿರ್ಮಿಸಿದ ಒಂದು ಶಕ್ತಿ. ಅಂತಹ ರೂಪಕ ಸಾಧ್ಯವಾದುದಕ್ಕೆ ಅವರ ಮಾತಿಗೆ ಬೆಲೆ ಕೊಟ್ಟು ಲಕ್ಷಾಂತರ ಮಂದಿ ಪ್ರಾಣದ ಹಂಗನ್ನೂ ತೊರೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಹಿಂಸಾತ್ಮಕವಾಗಿ ತೊಡಗಿದರು. ಈಗ ನೂರು ವರ್ಷಗಳ ನಂತರ ಸ್ವಾತಂತ್ರ್ಯ ಹಾಗೂ ಬಂಧನದ ಅನುಭವವೇ ಗೊತ್ತಿಲ್ಲದ ನಾವು ಸಾರಾಸಗಟಾಗಿ ವಿಮರ್ಶೆ ಮಾಡುವುದು ಸುಲಭ. ಆದರೆ ಗಾಂಧಿಯಾಗುವುದು ಸುಲಭವಲ್ಲ ಎಂದರು.

ಕಾರ್ಯಕ್ರಮದಲ್ಲಿ ಹಾಸನ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ತಾರಾನಾಥ, ಹಾಸನ ವಿಶ್ವವಿದ್ಯಾಲಯದ ಬಿ.ಎ. ಜಗದೀಶ್ ಇನ್ನೂ ಮುಂತಾದವರು ಹಾಜರಿದ್ದರು.