ಸಾಂದರ್ಭಿಕ ಚಿತ್ರ 
ಜಿಲ್ಲೆ

ಬೆಂಗಳೂರು-ಮೈಸೂರು ಮಾರ್ಗದಲ್ಲಿ ಮತ್ತೆ ಪ್ರವಾಹ ಸಾಧ್ಯತೆ; ಇನ್ನು 4 ದಿನ ಭಾರಿ ಮಳೆ ಮುನ್ಸೂಚನೆ..

ರಾಮನಗರ: ಇದು ರಾಜಧಾನಿ ಬೆಂಗಳೂರು ಮೈಸೂರು ನಡುವೆ ಸಂಚರಿಸುವವರು ಇನ್ನು ನಾಲ್ಕು ದಿನಗಳ ಕಾಲ ಗಮನದಲ್ಲಿ ಇರಿಸಿಕೊಳ್ಳಬೇಕಾದಂಥ ಸಂಗತಿ. ಅಷ್ಟಕ್ಕೂ ಈ ನಾಲ್ಕು ದಿನಗಳಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವುದಿದ್ದರೆ ಸೂಕ್ತ ಮುಂಜಾಗ್ರತೆ ವಹಿಸುವುದು ಒಳಿತು. ಈ ಕುರಿತು ರಾಮನಗರ ಎಸ್​ಪಿ ಅವರೇ ಮುನ್ನೆಚ್ಚರಿಕೆಯ ಮಾತನ್ನು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಉಂಟಾದಂಥ ಭಾರಿ ಮಳೆ-ಪ್ರವಾಹ ಮತ್ತೆ ಸಂಭವಿಸುವ ಸುಳಿವಿನ ಹಿನ್ನೆಲೆಯಲ್ಲಿ ಈ ಮುನ್ಸೂಚನೆಯನ್ನು ನೀಡಲಾಗಿದೆ. ನಾಳೆ ಅಂದರೆ ಭಾನುವಾರದಿಂದ ಬುಧವಾರದವರೆಗೆ ಈ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ.

ಸದ್ಯ ಮಳೆ ವಾತಾವರಣ ಇರದಿದ್ದರೂ ನಾಲ್ಕು ದಿನಗಳ ಹಿಂದೆ ಉಂಟಾಗಿದ್ದ ಪರಿಸ್ಥಿತಿ ಮುಂದಿನ ನಾಲ್ಕು ದಿನಗಳಲ್ಲಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರುಕಳಿಸುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಮಾಹಿತಿ ನೀಡುವ ಜತೆಗೆ ಇತರ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನಾಳೆ ಭಾನುವಾರದಿಂದ ಬುಧವಾರದವರೆಗೂ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಸತತ ಎರಡು ಗಂಟೆ ಅತಿಯಾಗಿ ಮಳೆ ಬಂದರೆ ಮತ್ತೆ ಪ್ರವಾಹ ಉಂಟಾಗಬಹುದು. ಒಂದು ವೇಳೆ ಭಾರಿ ಮಳೆ ಬಂದರೆ ಬದಲಿ ಮಾರ್ಗ ಮಾಡುತ್ತೇವೆ. ಆಗ ಬೆಂಗಳೂರಿನಿಂದ ಬರುವವರು ಕನಕಪುರ ಹಾಗೂ ಕುಣಿಗಲ್ ಮಾರ್ಗವಾಗಿ ಸಂಚರಿಸಬೇಕಾಗುತ್ತದೆ. ಮೈಸೂರು ಕಡೆಯಿಂದ ಬರುವವರಿಗೆ ಮೈಸೂರು ಮತ್ತು ಮಂಡ್ಯ ಎಸ್​​ಪಿಯಿಂದ ಮಾಹಿತಿ ಪಡೆಯುತ್ತೇವೆ. ಈ ಮೂರು ಜಿಲ್ಲೆಗಳ ಎಸ್​ಪಿ ಕಚೇರಿ ಮಾಹಿತಿ ಮೇರೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್​ ಸಂತೋಷ್ ಬಾಬು ತಿಳಿಸಿದ್ದಾರೆ.