ವಿಜಯಪುರ: ಒಂದೆರಡು ತಿಂಗಳಿನಿಂದ ಮತ್ತೆ ಮತ್ತೆ ಭೂಕಂಪ ನಡೆಯುತ್ತಿರುವ ಈ ಊರಲ್ಲಿ ಇಂದು ಪುನಃ ಭೂಮಿ ಕಂಪಿಸಿದ್ದು, ಹಬ್ಬದ ಸಂಭ್ರಮದ ಬೆನ್ನಿಗೇ ಜನರಲ್ಲಿ ಆತಂಕ ಮೂಡಿಸಿದೆ. ಇಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕರಬಂಟನಾಳ ಗ್ರಾಮದಲ್ಲಿ ಲಘು ಭೂಕಂಪನ ಉಂಟಾಗಿದೆ.
ಈ ಪ್ರದೇಶದಲ್ಲಿ ಬೆಳಗ್ಗೆ 11.15 ಗಂಟೆ 22 ಸೆಕೆಂಡಿಗೆ ಸಂಭವಿಸಿದ ಲಘು ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 1.9ರಷ್ಟು ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು ಕರಬಂಟನಾಳ ಗ್ರಾಮದಿಂದ 2 ಕಿ.ಮೀ. ದೂರದಲ್ಲಿ ಇದ್ದಿರುವುದು ತಿಳಿದುಬಂದಿದೆ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.
ಇದನ್ನೂ ಓದಿ: ಅಗಲಿದ ಪುನೀತ್ಗಾಗಿ ಹಬ್ಬವನ್ನೇ ಸ್ಥಗಿತಗೊಳಿಸಿದ ಗ್ರಾಮಸ್ಥರು; ದೇವಸ್ಥಾನದ ಮುಂದೆ ಫೋಟೋ ಹಿಡಿದು ಶ್ರದ್ಧಾಂಜಲಿ..
ಮತ್ತೊಂದೆಡೆ ಇದೇ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ 3.30ಕ್ಕೆ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಜೋರಾದ ಸದ್ದಿನ ಜತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಜನರು ಹೇಳಿಕೊಂಡಿದ್ದರೂ ಭೂಕಂಪನದ ತೀವ್ರತೆ ಕುರಿತು ಖಚಿತ ಮಾಹಿತಿ ಲಭ್ಯವಿಲ್ಲ.
ಇದನ್ನೂ ಓದಿ: ಕೇಂದ್ರದ ಒಂದೇ ನಿರ್ಧಾರಕ್ಕೆ ದೇಶದ 22 ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಳಿಕೆ: ಜಾಸ್ತಿ ಇಳಿಕೆ ಎಲ್ಲಿ ಗೊತ್ತೇ?
ಜಿಲ್ಲೆಯಲ್ಲಿ ಮತ್ತೆ ಮತ್ತೆ ಭೂಕಂಪನ ಸಂಭವಿಸುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಇನ್ನೊಂದೆಡೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಭೂಮಿ ಕಂಪಿಸುವುದರಿಂದ ಸಾರ್ವಜನಿಕರು ಭಯ ಬೀಳುವ ಅಗತ್ಯವಿಲ್ಲ ಎಂದು ಹಿರಿಯ ವಿಜ್ಞಾನಿಗಳು ಈಗಾಗಲೇ ಧೈರ್ಯ ಹೇಳಿದ್ದಾರೆ.