ಜಿಲ್ಲೆ

ಕಾಂಗ್ರೆಸ್ ಭ್ರಮೆ ಕಳಚಿದೆ

ಹುಬ್ಬಳ್ಳಿ: ಮುಂದಿನ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದು ಬಿಂಬಿತವಾಗಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸಗಢನಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಕರ್ನಾಟಕದಲ್ಲಿ ಗೆಲುವಿನ ಬಳಿಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಭಾವಿಸಿದ್ದ ಕಾಂಗ್ರೆಸ್​ನ ಭ್ರಮೆ ಕಳಚಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನಾವು ಅಧಿಕಾರದಲ್ಲಿ ಮಧ್ಯಪ್ರದೇಶದಲ್ಲಿ ಭಾರಿ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೆ ಬಂದಿದ್ದೇವೆ. ಅನೇಕ ಹಗರಣ, ಭ್ರಷ್ಟಾಚಾರದ ಕಾರಣದಿಂದ ಕಾಂಗ್ರೆಸ್​ನ್ನು ರಾಜಸ್ಥಾನ ಮತ್ತು ಛತ್ತಿಸಗಢದಲ್ಲಿ ಜನರು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶಕ್ಕೆ ನೀಡಿರುವ ಕೊಡುಗೆಗಳು, ಸ್ಥಳೀಯ ನಾಯಕತ್ವ ಹಾಗೂ ಕಾರ್ಯಕರ್ತರ ಪರಿಶ್ರಮ ಬಿಜೆಪಿಯ ಗೆಲುವಿಗೆ ಕಾರಣ. 2024ರಲ್ಲಿ ಮೋದಿ ಅವರು 3ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೆಲಂಗಾಣ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್​ಗೆ ಲಾಭವಾಗಿದೆ. ಕಳೆದ ಬಾರಿ ನಾವು ಅಲ್ಲಿ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವು. ಈ ಬಾರಿ 8ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿರುವುದಲ್ಲದೇ ನಮ್ಮ ಮತ ಗಳಿಕೆ ಪ್ರಮಾಣ ಹೆಚ್ಚಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ತೆಲಂಗಾಣ ರಾಜ್ಯದಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದು ನಿಶ್ಚಿತ ಎಂದರು.