ಬೆಂಗಳೂರು:ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ವರದಿ ಅಂತಿಮವಾಗಿ ಸಿದ್ಧವಾಗಿದೆ.
ಸಂಚಾರಯುಕ್ತ, ಹಸಿರು, ಸ್ವಚ್ಛ, ಜನಹಿತ, ಆರೋಗ್ಯಕರ, ಟೆಕ್, ಜಲಸುರಕ್ಷಾ ಹಾಗೂ ಶಿಕ್ಷಣ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ನಾಗರಿಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕ್ಷೇಮಾಭಿವೃದ್ಧಿ ಸಂಘಟನೆಗಳಿಂದ 70 ಸಾವಿರಕ್ಕೂ ಅಧಿಕ ಸಲಹೆಗಳು ಸ್ವೀಕರವಾಗಿದೆ. ಈ ಎಲ್ಲ ಮಾಹಿತಿಗಳನ್ನು ಈಗಾಗಲೇ ಕ್ರೋಢೀಕರಿಸಿ ವರದಿ ಸಿದ್ಧಪಡಿಸಿರುವ ಬಿಬಿಎಂಪಿ, ಗಣೇಶ ಹಬ್ಬ ಮುಗಿದ ಬಳಿಕ ಸರ್ಕಾರಕ್ಕೆ ಸಲ್ಲಿಸಲಿದೆ. ಬಳಿಕ, ಸರ್ಕಾರವೂ 8 ವಿಷಯಗಳ ಆಧಾರದ ಮೇಲೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದೆ.
ಜಲಸುರಕ್ಷಾ ವಿಭಾಗದಲ್ಲಿ ಪ್ರವಾಹ ನಿರ್ವಹಣೆಗೆ ವಿಶೇಷ ಯೋಜನೆ ಸಿದ್ಧಪಡಿಸಬೇಕು. ನಗರದಾದ್ಯಂತ ಪ್ರವಾಹದ ಸ್ಥಳಗಳು, ನೀರಿನ ನಿಶ್ಚಲತೆಯಿರುವ ಪ್ರದೇಶಗಳನ್ನು ನಕ್ಷೆ ಮಾಡಲು ಸಮಗ್ರ ಪ್ರಚಾರ ಕೈಗೊಳ್ಳಬೇಕು. ‘ಸ್ಪಾಂಜ್ ಸಿಟಿ’ ವಿಧಾನ ಅಳವಡಿಸಿಕೊಳ್ಳಬೇಕು. ನೀರಿನ ಒಳ ನುಸುಳುವಿಕೆ, ಹರಿವಿನ ನಿಯಂತ್ರಣಕ್ಕಾಗಿ ಜೈವಿಕ ಸ್ವೇಲ್ಸ್, ರೀಚಾರ್ಜ್ ಬಾವಿ, ಜೌಗು ಪ್ರದೇಶಗಳು ಮತ್ತು ಉದ್ಯಾನಗಳಂತಹ ಪ್ರಕೃತಿ ಆಧಾರಿತ ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ತೃತೀಯ ಮಳೆನೀರಿನ ಚರಂಡಿಗಳ ನಿಯಮಿತವಾಗಿ ಹೂಳು ತೆಗೆಯಬೇಕು. ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಭಾಗಿಯಾಗಲು ಸುಲಭಗೊಳಿಸುವ ನಿಟ್ಟಿನಲ್ಲಿ ವಾರ್ಡ್‌ವಾರು ಡಿಜಿಟಲ್ ವೇದಿಕೆ ನಿರ್ಮಾಣ ಮಾಡಬೇಕು. ವಾರ್ಡ್ ಮಟ್ಟದ ಯೋಜನೆಗಳಲ್ಲಿ ಜನರ ಜತೆ ಸಮಾಲೋಚಿಸಬೇಕು. ಸ್ಥಳೀಯ ನಾಯಕರ ಅಭಿವೃದ್ಧಿಗೆ ಯುವ ಸಮಿತಿ ಒಳಗೊಂಡಂತೆ ವಾರ್ಡ್ ಸಮಿತಿ ರಚಿಸಬೇಕು.ಕಾರ್ಯಕ್ಷಮತೆ ಅಳೆಯಲು, ಸಹಯೋಗದ ಸ್ಪರ್ಧೆ ಪ್ರೋತ್ಸಾಹಿಸಲು ಸ್ಟೇಟ್ ಆ್ ವಾರ್ಡ್ ಮೆಟ್ರಿಕ್ ಅನುಷ್ಠಾನಕ್ಕೆ ತರಬೇಕೆಂಬ ಸಲಹೆಗಳು ಬಂದಿದೆ.
ಹಸಿರು
ನಗರದ ಎಲ್ಲ ವಸತಿ, ವಾಣಿಜ್ಯ ಕಟ್ಟಡಗಳಲ್ಲಿ ಹಸಿರು ಬೆಳೆಸಲು ಆದೇಶ ಹೊರಡಿಸಬೇಕು. ಪ್ರತಿ ಪ್ರದೇಶಗಳ ಮಾತ್ರವಲ್ಲದೆ ವಿಶೇಷವಾಗಿ ಕೊಳೆಗೇರಿ ಮತ್ತು ವಲಸೆ ಸ್ಥಳಗಳಲ್ಲಿ ಸಣ್ಣ ಉದ್ಯಾನ ಸ್ಥಾಪಿಸುವ ಸಂಬಂಧ ಹೂಡಿಕೆ ಮಾಡಲು ಪ್ರೋತ್ಸಾಹಿಸಬೇಕು. ವಾಣಿಜ್ಯ ಕಟ್ಟಡಗಳಿಗಾಗಿ ಇಂಧನ ಸಂರಕ್ಷಣೆ ಕಟ್ಟಡ ಸಂಕೇತಗಳಿಗೆ ಒತ್ತು ನೀಡಬೇಕು. ಮುನ್ಸಿಪಲ್ ಪ್ರಾಧಿಕಾರ, ಸ್ಮಾರ್ಟ್ ಸಿಟಿ ಮಿಷನ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಕಾಂಕ್ರೀಟ್ ಕ್ಲೀನ್ ಏರ್ ಆಕ್ಷನ್ ಯೋಜನೆ ಅನುಷ್ಠಾನಕ್ಕೆ ತರಬೇಕು.
ಸಾರಿಗೆ
ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಅನುಷ್ಠಾನಕ್ಕೆ ತರಬೇಕು. ಸಮೂಹ ಸಾರಿಗೆ ಸೇವೆಗೆ ಒತ್ತು ನೀಡಬೇಕು. ಖಾಸಗಿ ಸಂಸ್ಥೆಗಳಿಂದ ಕಾರ್‌ಪೂಲಿಂಗ್‌ಗೆ ಪ್ರೋತ್ಸಾಹ ನೀಡಬೇಕು. ಪರಿಸರ, ಗಾಳಿಯ ಗುಣಮಟ್ಟ ಮತ್ತು ಜನರ ಆರೋಗ್ಯದ ಮೇಲೆ ವೈಯಕ್ತಿಕ ವಾಹನಗಳ ಬಳಕೆಯಿಂದ ಆಗುವ ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು. ಸಾಂಸ್ಥಿಕ ಕಟ್ಟಡ ಹೊರತುಪಡಿಸಿ ರಸ್ತೆಯಲ್ಲಿ ವಾಹನ ನಿಲುಗಡೆ ತಡೆಯಬೇಕು. ವಾಣಿಜ್ಯ ಪ್ರದೇಶದಲ್ಲಿ ಬಹು ಹಂತದ ಪಾರ್ಕಿಂಗ್ ಅಭಿವೃದ್ಧಿಪಡಿಸಬೇಕು. ರಸ್ತೆಗಳಲ್ಲಿ ಮೀಸಲಾದ ಸೈಕ್ಲಿಂಗ್ ಲೇನ್ ಅಭಿವೃದ್ಧಿಪಡಿಸಬೇಕು ಎಂಬ ಬಗ್ಗೆ ಸಲಹೆಗಳು ಬಂದಿವೆ.
ಆರೋಗ್ಯ
ಆರೋಗ್ಯ ಸೇವೆಯಲ್ಲಿ ಹೂಡಿಕೆ ಹೆಚ್ಚಿಸುವುದು, ತುರ್ತು ಆರೋಗ್ಯ ಸೇವೆಗಳ ವ್ಯವಸ್ಥೆ ಜಾರಿ, ಪಾಲುದಾರರೊಂದಿಗೆ ಸಹಯೋಗ ಹೊಂದುವುದು, ಬೆಂಗಳೂರು ಆರೋಗ್ಯ ವ್ಯವಸ್ಥೆ ಅನುಷ್ಠಾನ, ಆರೋಗ್ಯ ವಿಧಾನ ಜಾರಿ, ವಾರ್ ರೂಮ್ ಮತ್ತು ಕಣ್ಗಾವಲು ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಯೋಗಾಲಯ ಸೇವೆ, ಬೆಂಗಳೂರಿಗೆ ಆಂಟಿಮೈಕ್ರೊಬಿಯಲ್ ನೀತಿ ಜಾರಿಗೆ ತರುವುದು, ಹವಾಮಾನ ಅನುಗುಣವಾಗಿ ಆರೋಗ್ಯ ವ್ಯವಸ್ಥೆ ಕಲ್ಪಿಸುವುದು, ಪಶುವೈದ್ಯಕೀಯ ಆರೈಕೆ ವ್ಯವಸ್ಥೆ ಸೇರಿ ಇತರೆ ಸಲಹೆಗಳು ಸಂಗ್ರಹವಾಗಿದೆ.
ಶಿಕ್ಷಣ
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ನೀಡಿಕೆ, ಮೂಲಸೌಕರ್ಯ ವ್ಯವಸ್ಥೆ, ಪಾರಂಪರಿಕ ಶಾಲಾ ಕಾಲೇಜು ಗುರುತಿಸಿ ವಿನ್ಯಾಸಗೊಳಿಸುವುದು, ಮಕ್ಕಳು ಹಾಗೂ ಪಾಲಕರಿಗೆ ಕೌನ್ಸಿಲಿಂಗ್ ನೀಡಿ ಎಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತೆ ಮಾಡುವುದು, ಬೆಂಗಳೂರನ್ನು ಜ್ಞಾನ ನಗರಿಯನ್ನಾಗಿ ಪರಿವರ್ತಿಸುವುದು, ನಗರದಲ್ಲಿ ಹೆಚ್ಚು ಗ್ರಂಥಾಲಯ ತೆರೆದು ಓದುವ ಹವ್ಯಾಸ ಹೆಚ್ಚಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಮಕ್ಕಳಿಗೆ ತರಬೇತಿ ನೀಡುವುದು, ಮಕ್ಕಳಿಗಾಗಿ ಕ್ಲಸ್ಟರ್ ಅಕಾಡೆಮಿಕ್ ಸೆಂಟರ್ ತೆರೆಯುವುದು, ತಂತ್ರಜ್ಞಾನ ಬಳಸಿಕೊಂಡು ಸುಲಭ ರೀತಿಯಲ್ಲಿ ಶಿಕ್ಷಣ ಕಲಿಯುವ ವ್ಯವಸ್ಥೆ ಕಲ್ಪಿಸುವುದು, ವಿಷಯದ ಜತೆಗೆ ಲೋಕಜ್ಞಾನದ ಬಗ್ಗೆ ಅರಿವು ಮೂಡಿಸಬೇಕು, ಯಾವ ವಿಷಯದಲ್ಲಿ ಮಕ್ಕಳಿಗೆ ಹೆಚ್ಚು ಆಸಕ್ತಿಯಿದೆ ಎಂಬುದನ್ನು ಅರಿತು ಅದೇ ವಿಷಯದಲ್ಲಿ ಹೆಚ್ಚು ಪ್ರೋತ್ಸಾಹ ನೀಡಬೇಕು ಹಾಗೂ ಸಿಎಸ್‌ಆರ್ ಅಡಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಸೇರಿ ಇತರ ಸಲಹೆಗಳು ಸ್ವೀಕರವಾಗಿವೆ.
ಘನ ತಾಜ್ಯದ ಸಲಹೆಗಳು
* ಮೂಲದಲ್ಲಿ ತ್ಯಾಜ್ಯ ವಿಂಗಡಿಸಿ
* ತ್ಯಾಜ್ಯದಿಂದ ವೇಸ್ಟ್ ಟು ಎನರ್ಜಿಯಾಗಿ ಪರಿವರ್ತಸಿ
* ಘನತ್ಯಾಜ್ಯ ನಿರ್ವಹಣೆಯನ್ನು ಕೇಂದ್ರೀಕೃತ, ವಿಕೇಂದ್ರೀಕೃತ ಪದ್ಧತಿ ಅಳವಡಿಸಿ
* ತ್ಯಾಜ್ಯ ವಿಲೇವಾರಿ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸಿ
* ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಿ ವೈಜ್ಞಾನಿಕ ನಿರ್ವಹಣೆ ಮಾಡಿ
* ಡೋರ್ ಟು ಡೋರ್ ತ್ಯಾಜ್ಯ ವಿಂಗಡಣೆಗೆ ಲಿಂಕ್ ವರ್ಕಸ್ ಬಳಸಿಕೊಳ್ಳಿ
* ಆಟೋ ಟಿಪ್ಪರ್‌ಗಳ ಮೇಲೆ ನಿಗಾ ಇಟ್ಟು ಮೇಲ್ವಿಚಾರಣೆ
* ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್ ಅಳವಡಿಸಿ
* ಪ್ರತಿ ವಲಯದಲ್ಲೂ ಕಂಟ್ರೋಲ್ ಕಮಾಂಡ್ ಸೆಂಟರ್ ಸ್ಥಾಪಿಸಿ
* ಎಲ್ಲ ಮನೆಗಳಲ್ಲೂ ತ್ಯಾಜ್ಯ ಸಂಸ್ಕರಣೆ ಪದ್ಧತಿ ಜಾರಿಗೊಳಿಸಿ
* ಪ್ರತಿ ವಾರ್ಡ್‌ನಲ್ಲೂ ಒಣ ತ್ಯಾಜ್ಯ ಸಂಗ್ರಹಣ ಘಟಕ ತೆರೆಯಿರಿ
* ಸಂಪೂರ್ಣವಾಗಿ ಪ್ಲಾಸ್ಟಿಕ್ ಉತ್ಪನ್ನ ನಿಷೇಧಿಸಿ
* ಹೆಚ್ಚಾಗಿ ಶೌಚಗೃಹ ಸ್ಥಾಪಿಸಬೇಕು
* ಘನತ್ಯಾಜ್ಯ ನಿರ್ವಹಣೆಗೆ ಮೂಲಸೌಕರ್ಯ ಕಲ್ಪಿಸಿ
* ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯ ಬಿನ್ ಅಳವಡಿಸಿ
* ಅವಶ್ಯಕತೆ ಆಧಾರದ ಮೇಲೆ ಪೌರಕಾರ್ಮಿಕರನ್ನು ನೇಮಿಸಿ
* ಸ್ವಚ್ಛತಾ ವಿಭಾಗಕ್ಕೆ ಪೌರಕಾರ್ಮಿಕರನ್ನು ರಾಯಭಾರಿಯಾಗಿ ಮಾಡಿ