ಹುಬ್ಬಳ್ಳಿ: ಸಮೀಪದ ಬುಡರಸಿಂಗಿ ವೃತ್ತದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಅಫ್ತಾಬ್ ಕರಡಿಗುಡ್ಡ ಎಂಬಾತನ ಕಾಲಿಗೆ ಸೋಮವಾರ ಬೆಳಗ್ಗೆ ಫೈರಿಂಗ್ ಮಾಡಲಾಗಿದೆ.
ಸದರ್‌ಸೋಫಾ ಬ್ಯಾಹಟ್ಟಿ ಪಾರ್ಕ್‌ನಲ್ಲಿ ಭಾನುವಾರ ರಾತ್ರಿ ಎರಡು ಗ್ಯಾಂಗ್‌ಗಳ ಮಧ್ಯೆ ವಾರ್ ನಡೆದಿದೆ. ಇದರಲ್ಲಿ ಜಾವೂರ ಬೇಪಾರಿ ಎಂಬಾತನಿಗೆ ಗಂಭೀರವಾಗಿ ಗಾಯವಾಗಿತ್ತು. ಈತನ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು. ವಿವರ ತೆಗೆದು ತನಿಖೆ ಮಾಡಿದಾಗ ಜಾವೂರ ಸಹಚರರು, ಇನ್ನೊಂದು ಗುಂಪಿನವರ ಮೇಲೆ ದಾಳಿ ಮಾಡಿರುವುದು ತಿಳಿದು ಬಂದಿದೆ. ಅಫ್ತಾಬ್ ಗುಂಪಿನವರು ಕೂಡ ದಾಳಿ ಮಾಡಿದ್ದಾರೆ. ಮಾರಕಾಸ್ತ್ರ, ಕೊಲೆಯತ್ನ ಸೇರಿದ ವಿವಿಧ ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲು ಮಾಡಿಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖವಾಗಿ ಆರು ಜನರನ್ನು ಭಾನುವಾರ ರಾತ್ರಿ ವಶಕ್ಕೆ ಪಡೆಯಲಾಗಿತ್ತು. ಆದರೆ, ಪ್ರಮುಖ ಆರೋಪಿ ಅಫ್ತಾಬ್ ಕರಡಿಗುಡ್ಡ ಮಾತ್ರ ಸಿಕ್ಕಿರಲಿಲ್ಲ. ಮಾಹಿತಿ ಮೇರೆಗೆ ಸೋಮವಾರ ಬೆಳಗ್ಗೆ 10.15ರ ಸುಮಾರಿಗೆ ಪೊಲೀಸರ ತಂಡ ಬುಡರಸಿಂಗಿ ವೃತ್ತದಲ್ಲಿ ತೆರಳಿದಾಗ ಅಫ್ತಾಬ್ ಪತ್ತೆಯಾಗಿದ್ದಾನೆ. ಕಸಬಾಪೇಟೆ ಠಾಣೆಯ ಪೊಲೀಸ್ ಪೇದೆಗಳಾದ ಎಚ್.ಆರ್. ರಾಮಾಪುರ, ರಾಜು ರಾಥೋಡ, ಎನ್. ಪಾಲಯ್ಯ ಅವರ ಮೇಲೆ ಹಲ್ಲೆ ಮಾಡಿ ಅಫ್ತಾಬ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪಿಎಸ್‌ಐ ವಿಶ್ವನಾಥ ಆಲಮಟ್ಟಿ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಅಫ್ತಾಬ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಅಫ್ತಾಬ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ಕಿಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
‘‘ಹಿಂದಿನ ವೈಷಮ್ಯ ಹಿನ್ನೆಲೆಯಲ್ಲಿ ಅಂದರೆ 2022ರಲ್ಲಿ ಜಾವೂರ ಜತೆಗಿದ್ದ ಜಾಫರ್ ಎಂಬಾತ ಅಫ್ತಾಬ್ ಸಹೋದರನನ್ನು ಕೊಲೆ ಮಾಡಿದ್ದ. ಇದೇ ಆಧಾರದಲ್ಲಿ 2024ರ ಮಾರ್ಚ್‌ನಲ್ಲಿ ಜಾವೂರನನ್ನು ರಾಯಚೂರು ನೇತಾಜಿ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿತ್ತು. ನಿನ್ನೆ ರಾತ್ರಿ ಹುಬ್ಬಳ್ಳಿಗೆ ಬಂದಿದ್ದ ಜಾವೂರ, ತನ್ನ ಸಹಚರರೊಂದಿಗೆ ಗ್ಯಾಂಗ್ ವಾರ್ ನಡೆಸಿದ್ದಾನೆ. ಈತ ಗಡಿಪಾರು ಬ್ರೇಕ್ ಮಾಡಿ ಏಕೆ ಈ ಭಾಗಕ್ಕೆ ಬಂದಿದ್ದ ಎಂಬುದರ ಕುರಿತು ತನಿಖೆ ಮಾಡಲಾಗುವುದು’’ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಸುದ್ದಿಗಾರರಿಗೆ ತಿಳಿಸಿದರು.