ಹಾನಗಲ್ಲ: ಪಟ್ಟಣದ ಸೌಂದರ್ಯ ಹೆಚ್ಚಿಸಲು ಒಂದು ಸಾವಿರ ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದ್ದು, ಹೊಲ-ಗದ್ದೆಗಳ ಬದುಗಳಲ್ಲಿ ನೆಡಲು ರೈತರಿಗೆ ಸಹಾಯಧನದಲ್ಲೂ ಸಸಿಗಳನ್ನು ವಿತರಿಸಲಾಗುತ್ತಿದೆ. ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪುರಸಭೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಪಟ್ಟಣದ ನವನಗರದ ಉದ್ಯಾನದಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮದಡಿ ಒಂದು ಸಾವಿರ ಸಸಿ ನೆಡುವ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಮಳೆ ಸಮಯೋಚಿತವಾಗಿ ಬೀಳುತ್ತಿಲ್ಲ. ಇಂಥ ಹವಾಮಾನ ವೈಪರೀತ್ಯದಿಂದಾಗಿ ಅತಿವೃಷ್ಟಿ, ಅನಾವೃಷ್ಟಿಯ ಸಂಕಷ್ಟಗಳು ತಪ್ಪುತ್ತಿಲ್ಲ. ಮಳೆ ಇಲ್ಲದೇ ರೈತರ ಕೈಗೆ ಬೆಳೆಯೂ ಸಿಗುತ್ತಿಲ್ಲ. ಇಂತಹ ಸಮಸ್ಯೆಗಳನ್ನು ರೈತರು ಎದುರಿಸುವಂತಾಗಿದೆ. ಸ್ವಚ್ಛ ಪರಿಸರ, ಅರಣ್ಯೀಕರಣಗಳು ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಅರಣ್ಯ ಇಲಾಖೆಯಿಂದ 50 ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದರು.
ಸಾರ್ವಜನಿಕರು ಸಸಿಗಳನ್ನು ನೆಡುವ ಸಂದರ್ಭದಲ್ಲಿ ತೋರುವ ಉತ್ಸಾಹ, ಇಚ್ಛಾಶಕ್ತಿ ಅವುಗಳನ್ನು ಉಳಿಸಿ-ಬೆಳೆಸುವಲ್ಲಿಯೂ ಇರಬೇಕು. ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸದಸ್ಯರು ಸಸಿ ನೆಡಲು ಜಾಗ ಗುರುತಿಸಬೇಕು. ಸಸಿಗಳ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಖುರ್ಷಿದ್ ಅಹ್ಮದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಸದಸ್ಯರಾದ ಪರಶುರಾಮ ಖಂಡೂನವರ, ವಿರೂಪಾಕ್ಷಪ್ಪ ಕಡಬಗೇರಿ, ಶಂಶಿಯಾಬಾನು ಬಾಳೂರ, ಮಮತಾ ಆರೆಗೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮೇಕಾಜಿ ಕಲಾಲ, ವಿನಯ ಬಂಕನಾಳ, ಉಮೇಶ ಮಾಳಗಿ, ರೇಖಾ ಸಾತಪತಿ, ಪ್ರಕಾಶ ತಳವಾರ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ, ಕಿರಿಯ ಇಂಜಿನಿಯರ್ ನಾಗರಾಜ ಮಿರ್ಜಿ, ಎನ್.ಎಸ್. ನಾಗನೂರ, ಜಿ.ಟಿ. ಪೂಜಾರ, ಅರಣ್ಯ ಇಲಾಖೆ ಅಧಿಕಾರಿಗಳಾದ ಎಸ್.ಎಂ. ತಳವಾರ, ಎಸ್. ಚೌಗಲೆ, ಇತರರಿದ್ದರು.