ಜಿಲ್ಲೆ

2 ಲಕ್ಷಕ್ಕೂ ಅಧಿಕ ಜನರಿಗೆ ಆತಂಕ

ವಿಜಯವಾಣಿ ಸುದ್ದಿಜಾಲ ಕಾರವಾರ

ಜಿಲ್ಲೆಯ 1.75 ಲಕ್ಷ ಕುಟುಂಬಗಳ 2.42 ಲಕ್ಷ ಜನರು ಕರೊನಾದಿಂದ ತೊಂದರೆಗೆ ಒಳಗಾಗಬಹುದಾಗಿದ್ದು, ಅವರ ಬಗ್ಗೆ ಆರೋಗ್ಯ ಇಲಾಖೆ ವಿಶೇಷ ನಿಗಾ ಇರಿಸಲು ಮುಂದಾಗಿದೆ.

10 ವರ್ಷದೊಳಗಿನ ಮಕ್ಕಳು, 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು, ಕ್ಯಾನ್ಸರ್, ಕಿಡ್ನಿ ಸೇರಿ ಇತರ ಗಂಭೀರ ಕಾಯಿಲೆಗಳಿಗೆ ಒಳಗಾದವರಿಗೆ ಕರೊನಾ ಶೀಘ್ರ ಬಾಧಿತಲಿದೆ ಮತ್ತು ಮಾರಣಾಂತಿಕವಾಗಲಿದೆ ಎಂಬುದು ತಜ್ಞರ ಅನುಭವ. ಹೀಗಾಗಿ ಜಿಲ್ಲೆಯಲ್ಲಿ ಮನೆ, ಮನೆ ಆರೋಗ್ಯ ಸಮೀಕ್ಷೆ ನಡೆದಿದೆ. ಅದರಲ್ಲಿ ಈ ಸೂಕ್ಷ್ಮ ಆರೋಗ್ಯ ಪರಿಸ್ಥಿತಿ ಇರುವವರ ಪಟ್ಟಿ ಮಾಡಲಾಗಿದೆ.

ಜಿಲ್ಲೆಯ 4,23,099 ಮನೆಗಳ 15 ಲಕ್ಷ ಜನಸಂಖ್ಯೆಯನ್ನು ಸಮೀಕ್ಷೆಗೊಳಪಡಿಸಲಾಗಿದೆ. ಅವರಲ್ಲಿ 1.75 ಲಕ್ಷ ಮನೆಗಳನ್ನು ಸೂಕ್ಷ್ಮ ಎಂದು ಗುರುತಿಸಿ ವಿಶೇಷವಾಗಿ ಕೇಂದ್ರೀಕರಿಸಲಾಗುತ್ತಿದೆ. ಇನ್ನು 1,69,059 ವೃದ್ಧರು, 63,236 ಜನ ಇತರ ಗಂಭೀರ ಕಾಯಿಲೆ ಇರುವವರು. 10,432 ಗರ್ಭಿಣಿಯರನ್ನು ಗುರುತಿಸಲಾಗಿದೆ. ಅವರೆಲ್ಲರಿಗೂ ಕರೊನಾ ಬೇಗ ತಗುಲಬಹುದು, ಸಂಕಷ್ಟಕ್ಕೆ ಒಳಗಾಗುವವರು ಎಂದು ಪರಿಗಣಿಸಲಾಗಿದೆ.

ಸೋಂಕಿತ ಲಕ್ಷಣ ಇರುವ 180 ಜನ: ಜ್ವರ, ಶೀತ, ಮುಂತಾದ ಕರೊನಾ ಸೋಂಕಿನ (ಐಎಲ್​ಐ, ಸಾರಿ) ಲಕ್ಷಣ ಇರುವ 180 ಜನರನ್ನು ಸಮೀಕ್ಷೆ ವೇಳೆ ಗುರುತಿಸಲಾಗಿದೆ. ಭಟ್ಕಳ ವಿಧಾನಸಭೆ ಕ್ಷೇತ್ರದಲ್ಲಿ 42, ಹಳಿಯಾಳದದಲ್ಲಿ 20, ಕಾರವಾರದಲ್ಲಿ 42, ಕುಮಟಾದಲ್ಲಿ 14, ಶಿರಸಿಯಲ್ಲಿ 46, ಯಲ್ಲಾಪುರದ ಕ್ಷೇತ್ರದಲ್ಲಿ 16 ಜನರಿದ್ದಾರೆ ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಕರೊನಾ ಸೋಂಕು ಸಾರ್ವಜನಿಕವಾಗಿ ಹಬ್ಬಿಲ್ಲ. ಆದರೆ, ಮುಂದೆ ಒಮ್ಮೆ ಹರಡಿದಲ್ಲಿ ಎಂಬ ಕಾರಣದಿಂದ ನಾವು ಆರೋಗ್ಯ ಸಮೀಕ್ಷೆ ಕೈಗೊಂಡಿದ್ದೇವೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಅನಿವಾರ್ಯ ಬಿಟ್ಟು ಬೇರೆ ಕಾರಣಗಳಿಗೆ ಯಾವುದೇ ಕಾರಣಕ್ಕೂ ಹೊರಗೆ ಸುತ್ತಾಡಬಾರದು. | ಡಾ. ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ ಉತ್ತರ ಕನ್ನಡ