ಬೀರೂರು ಸಮೀಪದ ಹೆಳವರ ಕಾಲನಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಫಲಾನುಭವಿ ಮಲ್ಲಮ್ಮ ಅವರ ಕನಸಿನ ವಾತ್ಸಲ್ಯ ಮನೆ ಗೃಹಪ್ರವೇಶದಲ್ಲಿ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಪ್ರಕಾಶ್ ರಾವ್, ಸಂಜೀವ ಗೌಡ, ರತ್ನಾ ಮೈಪಲ್, ಚಂದನ್ ಇತರರಿದ್ದರು. 
ಜಿಲ್ಲೆ

ಅಸಹಾಯಕರಿಗೆ ವಾತ್ಸಲ್ಯ ಮನೆ ಆಸರೆ

ಎಸ್.ಎನ್.ರವೀಂದ್ರ

ಬೀರೂರು: ಸಮಾಜ ಬದಲಾವಣೆಯಾಗಬೇಕಾದಲ್ಲಿ ಬದುಕಿಗೆ ಮೂಲಭೂತ ಸೌಕರ್ಯಗಳು ಅವಶ್ಯಕ. ಅದರಲ್ಲಿ ಪ್ರಮುಖವಾಗಿ ಸೂರು ಎನ್ನುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಯೋಜನೆ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ತಿಳಿಸಿದರು.

ಹೆಳವರ ಕಾಲನಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬುಧವಾರ ಫಲಾನುಭವಿ ಮಲ್ಲಮ್ಮ ಅವರ ಕನಸಿನ ವಾತ್ಸಲ್ಯ ಗೃಹಪ್ರವೇಶದಲ್ಲಿ ಮಾತನಾಡಿದರು.
ಬಡವರಾದ ಸದಸ್ಯರಿಗೆ ಯೋಜನೆಯಲ್ಲಿ ಉಚಿತ ವಸತಿ ನಿರ್ಮಾಣ ಮಾಡಿಕೊಡಲಾಗುತ್ತದೆ. ಸದಸ್ಯರು ನಿವೇಶನ ಹೊಂದಿದ್ದರೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಧರ್ಮಸ್ಥಳ ಸಂಸ್ಥೆ ಮಹಿಳೆಯರಿಗೆ ಆರ್ಥಿಕ ನೆರವು ನೀಡುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಾತ್ಸಲ್ಯ ಕಾರ್ಯಕ್ರಮದಲ್ಲಿ ಮಹಿಳೆಗಾಗಿಯೇ ಮಾಸಾಶನ, ಪೌಷ್ಟಿಕ ಆಹಾರ ಮಿಕ್ಸ್ ವಿತರಣೆ, ವಾತ್ಸಲ್ಯ ಕಿಟ್ ಪೂರೈಕೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ, ವಾತ್ಸಲ್ಯ ಕಾರ್ಯಕ್ರಮ ಗ್ರಾಮೀಣ ಭಾಗಗಳ ಅಸಹಾಯಕರಿಗೆ ಸೂರು ಕಲ್ಪಿಸಿ ಆಸರೆಯಾಗುತ್ತಿದೆ ಎಂದರು.
ತಾಲೂಕು ಯೋಜನಾಧಿಕಾರಿ ಸಂಜೀವ ಗೌಡ, ಪ್ರಾದೇಶಿಕ ವ್ಯಾಪ್ತಿಯ ಜ್ಞಾನ ವಿಕಾಸ ಯೋಜನಾಧಿಕಾರಿ ರತ್ನಾ ಮೈಪಲ್, ಗ್ರಾಪಂ ಸದಸ್ಯ ಸುಧಾಕಾಂತ್, ವಲಯ ಮೇಲ್ವಿಚಾರಕ ಚಂದನ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುಮಿತ್ರಾ, ಸೇವಾ ಪ್ರತಿನಿಧಿ ನೇತ್ರಾವತಿ ಇತರರಿದ್ದರು.