ಜಿಲ್ಲೆ

ಏರೋ ಇಂಡಿಯಾ: 2ನೇ ದಿನವೂ ಟ್ರಾಫಿಕ್ ಜಾಮ್

ಆರ್.ತುಳಸಿಕುಮಾರ್

ಬೆಂಗಳೂರು: ಲೋಹದ ಹಕ್ಕಿಗಳ ಹಾರಾಟವನ್ನು ಕಣ್ತುಂಬಿಕೊಳ್ಳಲು ಏರೋ ಇಂಡಿಯಾಗೆ ಸಾವಿರಾರು ಜನರು ಆಗಮನ ಹಾಗೂ ನಿರ್ಗಮನದ ವೇಳೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ತೊಂದರೆ ಅನುಭವಿಸಿದರು. ಮೊದಲ ದಿನ ಉದ್ಘಾಟನೆ ವೇಳೆ ಹೆಚ್ಚಿನ ಸಂಖ್ಯೆಯ ಗಣ್ಯರು ಆಗಮಿಸಿದ್ದರಿಂದ ಪ್ರದರ್ಶಕರ ಸಹಿತ ವೀಕ್ಷಕರು ಏರ್‌ಪೋರ್ಟ್ ರಸ್ತೆಯಲ್ಲಿ ಗಂಟೆಗಟ್ಟಲೇ ಕಾಯಬೇಕಾಯಿತು. ಮಂಗಳವಾರ ಕೂಡ ಇದೇ ಸ್ಥಿತಿ ಕಂಡುಬಂದಿತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಇದೇ ರಸ್ತೆಯನ್ನು ಅವಲಂಬಿಸಬೇಕಾಗಿರುವುದರಿಂದ ವಿಮಾನ ಪ್ರಯಾಣಿಕರು ಕ್ಯಾಬ್, ಸ್ವಂತ ಕಾರುಗಳಲ್ಲಿ ಬೇಗನೆ ಸಾಗಲು ಸಾಧ್ಯವಾಗಲಿಲ್ಲ. ವಿಮಾನ ಪ್ರಯಾಣಿಕರಿಗೆ ಒಂದು ಪಥವನ್ನು ಮೀಸಲಿಟ್ಟಿದ್ದರೂ, ಆ ಮಾರ್ಗದತ್ತ ತೆರಳಲು ಕಷ್ಟಪಡುತಿದ್ದರು. ಯಲಹಂಕದಿಂದ ಹುಣಸಮಾರನಹಳ್ಳಿ ವರೆಗಿನ ಎರಡೂ ಬದಿ ಮುಖ್ಯ ಕ್ಯಾರೇಜ್ ಹಾಗೂ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರ ಮಧ್ಯೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ನಾಗರಿಕರು ತಡವಾಗಿ ಗಮ್ಯ ಸೇರುವಂತಾಯಿತು.

ಏರ್ ಶೋ ನಡೆಯುತ್ತಿರುವ ಜಾಗಕ್ಕೆ ತೆರಳು ಎಲ್ಲರನ್ನು ಒಂದೇ ಪ್ರವೇಶ ದ್ವಾರದ ಮೂಲಕ ಬಿಡಲಾಗುತ್ತಿದೆ. ಪ್ರವೇಶ ಪತ್ರ, ಗುರುತಿನ ಚೀಟಿ ಹೊಂದಿದ್ದರೂ, ಅವುಗಳನ್ನು ಪರಿಶೀಲಿಸಿ, ತಪಾಸಣೆ ಮಾಡಿಯೇ ಒಳಬಿಡಲಾಗುತ್ತಿದೆ. ಇದರಿಂದ ಗಣ್ಯರ ಕಾರುಗಳು ಸೇರಿ ಎಲ್ಲ ವಾಹನಗಳು ಒಂದರ ಹಿಂದೆ ಮತ್ತೊಂದು ಎಂಬಂತೆ ವಾಹನಗಳು ನಿಂತು ಸಂಚಾರಕ್ಕೆ ಅಡ್ಡಿಯಾಯಿತು.