ಕೋಲಾರ : ಕೆಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಕೆರೆಗಳಲ್ಲಿ ಬೆಳೆಯುತ್ತಿರುವ ಜಲ ಭಕ್ಷಕ ಕಳೆ ನಿರ್ಮೂಲನೆಗೆ ಸಣ್ಣ ನೀರಾವರಿ ಇಲಾಖೆ ತಡವಾಗಿಯಾದರೂ ಏರಿಯೇಟರ್ ಅಳವಡಿಸುವ ಮೂಲಕ ನೀರು ಶುದ್ಧಗೊಳಿಸಲು ಹಾಗೂ ಆಮ್ಲಜನಕದ ಕೊರತೆಯಿಂದ ಜಲಚರಗಳನ್ನು ಸಂರಕ್ಷಿಸಲು ಮುಂದಾಗಿದೆ.
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜಲಭಕ್ಷಕ ಕಳೆಯಿಂದ ಕೆರೆ ಮತ್ತು ಜಲಚರಗಳನ್ನು ಕಾಪಾಡಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಮಹಾರಾಷ್ಟ್ರದ ನಾಗಪುರದಲ್ಲಿರುವ ನೀರಾ ಹಾಗೂ ಇನ್ನಿತರ ಸಂಶೋಧನಾ ಕೇಂದ್ರಗಳ ಸಲಹೆ ಪಡೆದು ನರಸಾಪುರ ಹಾಗೂ ಚೌಡದೇನಹಳ್ಳಿಯ ಕೆರೆಗಳಲ್ಲಿ ಶುಕ್ರವಾರ ಪ್ರಾಯೋಗಿಕವಾಗಿ ಆಮ್ಲಜನಕ ಪೂರೈಸುವ ಏರಿಯೇಟರ್‌ಗಳನ್ನು ನೀರಿಗೆ ಬಿಟ್ಟಿದ್ದು, ಕೆರೆಯಲ್ಲಿ ನೀರು ಚಿಮ್ಮುತ್ತಿರುವುದರಿಂದ ಅಪರೂಪದ ದೃಶ್ಯ ಸವಿಯಲು ಸಾರ್ವಜನಿಕರು ಕೆರೆಯತ್ತ ಧಾವಿಸುತ್ತಿದ್ದಾರೆ.
ಏರಿಯೇಟರ್ ನೀರಿನಲ್ಲಿ ಬೆಳೆದಿರುವ ಕಳೆ ವ್ಯಾಪಿಸದಂತೆ ನಿಯಂತ್ರಿಸುವುದಲ್ಲದೆ ಜಲಚರಗಳಿಗೆ ಆಮ್ಲಜನಕ ಒದಗಿಸಲು ಸಹಾಯ ಮಾಡುತ್ತದೆ. ಈಗಾಗಲೇ 50ಕ್ಕೂ ಹೆಚ್ಚು ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿದಿದೆಯಲ್ಲದೆ ಮಳೆಯಿಂದಾಗಿ ಕೆರೆಗಳು ಕೋಡಿ ಹರಿದು ಪ್ರವಾಸಿ ತಾಣಗಳಾಗಿ ಕಂಗೊಳಿಸುತ್ತಿವೆ.
ಕೆರೆಯನ್ನು ಕಳೆ ಆವರಿಸಿಕೊಳ್ಳುತ್ತಿರುವುದರಿಂದ ನೀರು ಹಸಿರು ಬಣ್ಣಕ್ಕೆ ತಿರುಗಿ ಪಾಚಿ ಕಟ್ಟಿಕೊಳ್ಳುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿತ್ತು. ಜಲಭಕ್ಷಕ ಕಳೆ ತೆರವುಗೊಳಿಸಬೇಕೆಂಬ ಜನರ ಬೇಡಿಕೆ ಈಡೇರಿಸುವ ಮೂಲಕ ಸಣ್ಣ ನೀರಾವರಿ ಇಲಾಖೆ ಪ್ರಶಂಸೆಗೆ ಪಾತ್ರವಾಗಿದೆ.
ತಡವಾಗಿ ಎಚ್ಚೆತ್ತ ಅಧಿಕಾರಿಗಳು: ಜಿಲ್ಲೆಯನ್ನು ಬರದಿಂದ ಮುಕ್ತಗೊಳಿಸಲು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಕೆಸಿ ವ್ಯಾಲಿ ಯೋಜನೆ ಅಂತರ್ಜಲ ಅಭಿವೃದ್ಧಿಗೆ ವರದಾನವಾಗಿದ್ದರೂ ಕೆರೆಗಳಲ್ಲಿ ಬೆಳೆದಿರುವ ಕಳೆ ತೆರವುಗೊಳಿಸಿ ನೀರಿನ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳದಿದ್ದರೆ ಯೋಜನೆಗೆ ಖರ್ಚು ಮಾಡಿರುವ ಕೋಟ್ಯಂತರ ರೂ. ವ್ಯರ್ಥವಾಗಬಹುದೆಂದು ಜಲ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕಳೆದ 2019ರ ಅಕ್ಟೋಬರ್ 31ರಂದು ವಿಜಯವಾಣಿ ವರದಿ ಮಾಡಿತ್ತು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಡವಾಗಿಯಾದರೂ ಏರಿಯೇಟರ್ ಅಳವಡಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
ಜಲ ತಜ್ಞರ ಮತ್ತು ಸಾರ್ವಜನಿಕರ ಸಲಹೆ ಮೇರೆಗೆ ಜಲ ಭಕ್ಷಕ ಕಳೆಯಿಂದ ಕೆರೆಗಳನ್ನು ಪಾರು ಮಾಡಲು ಏರಿಯೇಟರ್‌ಗಳನ್ನು ನರಸಾಪುರ ಮತ್ತು ಚೌಡದೇನಹಳ್ಳಿ ಕೆರೆಯಲ್ಲಿ ಅಳವಡಿಸಲಾಗಿದೆ. ಏರಿಯೇಟರ್ ನೀರಿನಲ್ಲಿ ಚಲಿಸುವಾಗ ನೀರು ಆಗಸಕ್ಕೆ ಚಿಮ್ಮುವುದರಿಂದ ಕೆಲವರು ಕೆಸಿ ವ್ಯಾಲಿ ಪೈಪ್ ಲೈನ್ ಒಡೆದು ಹೋಗಿರಬಹುದೆಂದು ಆತಂಕ ವ್ಯಕ್ತಪಡಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿದುಬಿಟ್ಟಿದ್ದು, ಯಾರೂ ಗಾಬರಿ ಪಡಬೇಕಾಗಿಲ್ಲ. ಎಂ.ಕೃಷ್ಣ, ಎಇ, ಸಣ್ಣ ನೀರಾವರಿ ಇಲಾಖೆ(ಕೆಸಿ ವ್ಯಾಲಿ) ಕೆಸಿ ವ್ಯಾಲಿ ನೀರು ನಿಜಕ್ಕೂ ಜಿಲ್ಲೆಗೆ ವರದಾನವಾಗಿದೆ, ಆದರೆ ಕೆರೆಗಳಲ್ಲಿ ಜಲ ಭಕ್ಷಕ ಕಳೆ ಬೆಳೆಯುವುದರಿಂದ ಜಲ ಸಂರಕ್ಷಣೆ ಹಾಗೂ ಆಮ್ಲಜನಕ ಕೊರತೆಯಿಂದ ಜಲಚರಗಳು ಸಾಯುವುದನ್ನು ತಪ್ಪಿಸುವುದು ಕಷ್ಟವಾಗಿತ್ತು. ಸಣ್ಣ ನೀರಾವರಿ ಇಲಾಖೆಯವರು ಏರಿಯೇಟರ್‌ಗಳನ್ನು ಅಳವಡಿಸಿರುವುದು ಒಳ್ಳೆಯ ಬೆಳವಣಿಗೆ. ಕೆ.ಎನ್.ತ್ಯಾಗರಾಜು, ಪರಿಸರವಾದಿ, ಕೋಲಾರ