ಮಂಡ್ಯ: ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಆದೇಶ ಮಾಡಿದೆ. ಅದರಂತೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಅವರ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತು ಮೊಕದ್ದಮೆ ದಾಖಲಿಸುವುದಾಗಿ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಸದಸ್ಯ ಎಸ್.ಅರುಣ್‌ಕುಮಾರ್ ಎಚ್ಚರಿಸಿದರು.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರ ನೇತೃತ್ವದಲ್ಲಿ ಏಳು ನ್ಯಾಯಾಧೀಶರ ಪೀಠವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಡುವಿನ ವಿವಿಧ ಹಂತಗಳ ತಾರತಮ್ಯವನ್ನು ಪರಿಹರಿಸಲು ಉಪ ವರ್ಗೀಕರಣವನ್ನು ಅನುಮೋದಿಸಿದೆ. ಆದ ಕಾರಣ ಕೂಡಲೇ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಹೈಕಮಾಂಡ್ ಕೇಳಿ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಒಂದು ವೇಳೆ ಅವರು ಸಚಿವ ಸಂಪುಟ ಸಭೆ ಕರೆದು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದರು.
ವಕೀಲರಾದ ಶಿವಕುಮಾರ್, ರಾಜೇಂದ್ರ, ದಾಸಯ್ಯ ಇದ್ದರು.