ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಹೇಮಾವತಿ ಮಾತನಾಡಿದರು. ವಸಂತಕುಮಾರಿ, ದಾಕ್ಷಾಯಿಣಿ, ಸರಸ್ವತಿ ಇದ್ದರು. 
ಜಿಲ್ಲೆ

ಪೌಷ್ಟಿಕ ಆಹಾರ ಸೇವಿಸಲು ಮಹಿಳೆಯರಿಗೆ ಸಲಹೆ

ಗುಂಡ್ಲುಪೇಟೆ: ಕಿಶೋರಿಯರು, ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕ ಅಂಶವಿರುವ ಪದಾರ್ಥಗಳನ್ನು ತಿನ್ನುವ ಮೂಲಕ ರಕ್ತಹೀನತೆ ಆಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಸಲಹೆ ನೀಡಿದರು.

ರಾಷ್ಟ್ರೀಯ ಪೋಷಣಾ ಅಭಿಯಾನ ಯೋಜನೆಯಡಿ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವರ್ಷವೂ ರಕ್ತಹೀನತೆಯಿಂದ ಕಿಶೋರಿಯರು, ಗರ್ಭಿಯರು ಹಾಗೂ ಬಾಣಂತಿಯರ ಆರೋಗ್ಯದಲ್ಲಿ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕಾಂಶಯುಕ್ತ ಆಹಾರವನ್ನು ವಿತರಣೆ ಮಾಡುತ್ತಿದೆ. ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಅಲೀಂ ಪಾಷಾ ಮಾತನಾಡಿ, ತಾಯಂದಿರು ಮತ್ತು ಪಾಲಕರು ಮಕ್ಕಳಿಗೆ ಪೌಷ್ಟಿಕ ಆಹಾರಗಳಾದ ತರಕಾರಿ, ಸೊಪ್ಪುಗಳನ್ನು ಬಳಸಿ ಉತ್ತಮ ಆರೋಗ್ಯ ನೀಡಬೇಕು ಎಂದು ಕಿವಿಮಾತು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು ತಾಯಿ ಮತ್ತು ಮಗುವಿನ ಚಿತ್ರ ಬಿಡಿಸಿ ಫಲಾನುಭವಿಗಳು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಉತ್ತಮ ಆಹಾರ ಪದ್ಧತಿ ಕುರಿತು ಆಹಾರ ಮೇಳ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪಟ್ಟಣ ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ, ಹಿರಿಯ ಮೇಲ್ವಿಚಾರಕಿಯರಾದ ರುದ್ರವ್ವ ಬಸಪ್ಪ, ಸೋನಿಯಾ ಬೇಗಂ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷೆ ಸರಸ್ವತಿ, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸುಜಿಯಾ, ಜಿಲ್ಲಾ ಮಹಿಳಾ ಒಕ್ಕೂಟ ಅಧ್ಯಕ್ಷೆ ದಾಕ್ಷಾಯಿಣಿ, ಕಾರ್ಯದರ್ಶಿ ಗುರುಮಲ್ಲಮ್ಮ ಕಬ್ಬಹಳ್ಳಿ ಇತರರಿದ್ದರು.