ನಾಗಮಂಗಲ: ಜಾನುವಾರುಗಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಪ್ರತಿ ಆರು ತಿಂಗಳಿಗೊಮ್ಮೆ ಉಚಿತವಾಗಿ ನೀಡುವ ಕಾಲುಬಾಯಿ ಜ್ವರದ ಲಸಿಕೆಯನ್ನು ರೈತರು ತಪ್ಪದೆ ಹಾಕಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ರೈತರಿಗೆ ಸಮರ್ಪಕ ಸೇವೆ ನೀಡುವ ಸಲುವಾಗಿ ಪಶು ಇಲಾಖೆ ಹಾಗೂ ಮನ್‌ಮುಲ್‌ನ ವೈದ್ಯರು ಮತ್ತು ಸಿಬ್ಬಂದಿ ತಂಡ ತಾಲೂಕಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಏ.26ರಿಂದ ಜೂ.9ರವರೆಗೆ 45ದಿನಗಳ ಕಾಲ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಿದ್ದಾರೆ. ಲಸಿಕೆ ಹಾಕುವ ಕುರಿತು ಒಂದು ದಿನ ಮುಂಚಿತವಾಗಿ ಆಯಾ ಗ್ರಾಮದಲ್ಲಿ ಪ್ರಚಾರ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಜಾನುವಾರುಗಳನ್ನು ಹೊಂದಿರುವ ಪ್ರತಿ ರೈತರು ತಪ್ಪದೆ ಲಸಿಕೆ ಹಾಕಿಸುವ ಮೂಲಕ ಸರ್ಕಾರದ ಯೋಜನೆಯನ್ನು ಸಾರ್ಥಕಗೊಳಿಸಬೇಕು ಎಂದು ಮನವಿ ಮಾಡಿದರು.
ಮನ್‌ಮುಲ್ ನಿರ್ದೇಶಕರಾದ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶರತ್‌ರಾಜ್, ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಮಂಜೇಶ್, ಉಪ ವ್ಯವಸ್ಥಾಪಕ ಪ್ರಫುಲ್, ಪಶು ವೈದ್ಯರಾದ ಡಾ.ಹರ್ಷ, ಡಾ.ಸಾರಾ, ಮುಖಂಡ ಕೊಣನೂರು ಹನುಮಂತಯ್ಯ ಇತರರು ಇದ್ದರು.