ಹುಬ್ಬಳ್ಳಿ: ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಇಲ್ಲಿಯ ಲಿಂಗರಾಜನಗರದ ಆದರ್ಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೂರು ದಿನಗಳವರೆಗೆ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಿಜ್ಞಾನ ಹಾಗೂ ಗಣಿತ ವಿಷಯಗಳ ಕಾರ್ಯಾಗಾರದ ಸಮಾರೋಪ ಸಮಾರಂಭವು ಶನಿವಾರ ಜರುಗಿತು.
ಕಲಬುರ್ಗಿಯ ನರೋಣದ ಶ್ರೀ ಚನ್ನಮಲ್ಲದೇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಯ ಬಹಳಷ್ಟು ಮುಖ್ಯ. ಒಳ್ಳೆಯ ದಾರಿಯಲ್ಲಿ ಸಾಗಬೇಕು. ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ಲಿಂಗರಾಜ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು, ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಕಲಿಸಿ ಬೆಳಸುತ್ತಾರೆ. ನೀವು ಕೂಡ ಶಿಕ್ಷಕರ ಮಟ್ಟಕ್ಕೆ ಬೆಳೆದರೆ, ಶಿಕ್ಷಕರು ಹೆಮ್ಮೆ ಪಡುತ್ತಾರೆ. ಉತ್ತಮ ಫಲಿತಾಂಶ ಪಡೆದು ನಿಮ್ಮ ಶಾಲೆಗಳಿಗೆ ಕೀರ್ತಿ ತರಬೇಕು ಎಂದರು.
ಒಟ್ಟು 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. 3 ದಿನಗಳ ಕಾರ್ಯಾಗಾರದಲ್ಲಿ ನುರಿತ ಶಿಕ್ಷಕರು, ಪ್ರಾಧ್ಯಾಪಕರು ಅತ್ಯುತ್ತಮವಾಗಿ ಬೋಧಿಸಿದರು. ತಮ್ಮ ಅನುಭವ ಹಂಚಿಕೊಂಡರು.
ಭಾಗವಹಿಸಿದ್ದ ಶಿಕ್ಷಕರಿಗೆ ಕಿರುಕಾಣಿಕೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಎಸ್‌ಎಸ್‌ಎಲ್‌ಸಿ ಅಧ್ಯಯನ ಸಾಮಗ್ರಿ ವಿತರಿಸಲಾಯಿತು. ಕಿರು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ವಿಭಾಗದಲ್ಲಿ ವಿವಿಧ ಬಹುಮಾನ ಗಳಿಸಿದರು.
ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ, ನಿರ್ದೇಶಕರಾದ ಪ್ರೊ.ಬಿ.ಸಿ. ಗೌಡರ, ಪ್ರೊ.ಡೇನಿಯಲ್ ಹೊಸಕೇರಿ ಇತರರು ಇದ್ದರು.
ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ ತನುಶ್ರೀ ರಟ್ಟಿಹಳ್ಳಿ ಪ್ರಾರ್ಥಿಸಿದರು. ಪ್ರಾಚಾರ್ಯ ಕೃಷ್ಣ ಜೋಶಿ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮೀ ತಾಳಿಕೊಟಿಮಠ ವಂದಿಸಿದರು. ಸುನಂದಾ ಮೆಣಸಿನಕಾಯಿ ನಿರೂಪಿಸಿದರು.