ಜಿಲ್ಲೆ

ಸ್ವಾವಲಂಬಿ ಜೀವನ ನಡೆಸಲು ಸಲಹೆ

ಬಸವರಾಜ ವೀರಪ್ಪ ಗರಗ

ಉಪ್ಪಿನಬೆಟಗೇರಿ: ಸ್ವ ಉದ್ಯೋಗ ಕೈಗೊಳ್ಳಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಸಾಕಷ್ಟು ಅನುಕೂಲ ಕಲ್ಪಿಸಿದ್ದು ಅವರ ಸಹಕಾರ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಜಿಲ್ಲಾ ಜನಜಾಗೃತಿ ಸದಸ್ಯೆ ಸವಿತಾ ಅಮರಶೆಟ್ಟಿ ಹೇಳಿದರು.

ಸ್ಥಳೀಯ ಪಾಂಡುರಂಗ ವಿಠ್ಠಲ ಮಂದಿರದಲ್ಲಿ ಜ್ಞಾನ ವಿಕಾಸ ಯೋಜನೆಯಡಿ ಇತ್ತೀಚೆಗೆ ಆಯೋಜಿಸಿದ್ದ ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನಾಡಿನಾದ್ಯಂತ ಮಹಿಳಾ ಸದಸ್ಯರ ಸಂಘಗಳನ್ನು ತೆರೆದು ಹಲವಾರು ಕಾರ್ಯಕ್ರಮಗಳನ್ನು ಯೋಜನೆಯಡಿ ನಡೆಸುತ್ತ ಬಂದಿದ್ದಾರೆ. ಸ್ವ ಉದ್ಯೋಗಕ್ಕಾಗಿ ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಸಬಲರಾಗಲು ಅನುಕೂಲದ ಜೊತೆಗೆ ಇನ್ನೂ ಹತ್ತು ಹಲವು ಯೋಜನೆಗಳು ಸಂಘದಲ್ಲಿ ಲಭ್ಯವಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರಮೀಳಾ ಕೌಶಲ ಅಭಿವೃದ್ಧಿ ಸಂಸ್ಥೆ ನಿರ್ದೇಶಕಿ ಪ್ರೀಯಾ ಕೋದಂಪುರ, ಮನೆಯಲ್ಲಿದ್ದು ಮಾಡುವ ಸ್ವ ಉದ್ಯೋಗದ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಿದರು. ಸಿರಿ ಮಿಲೆಟ್ ಯೋಜನಾಧಿಕಾರಿ ರಮೇಶ ಅವರು, ಸಿರಿ ಧಾನ್ಯದ ಬಳಕೆ ಮತ್ತು ಅದರಿಂದ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದರು.

ರೇಣುಕಾ ರಾಯ್ಕರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಅಶೋಕ ಕೆ., ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ಯೋಜನಾಧಿಕಾರಿ ಮಲ್ಲಿಕಾ ಮಾತನಾಡಿದರು. ಗ್ರಾಮಸ್ಥರು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಸಮನ್ವಯ ಅಧಿಕಾರಿ ಸವಿತಾ, ಮೇಲ್ವಿಚಾರಕಿ ಪಲ್ಲವಿ ಶೆಟ್ಟಿ ಹಾಗೂ ಸೇವಾಪ್ರತಿನಿಧಿ ನೀಲಮ್ಮ ಚಂದರಗಿ ಕಾರ್ಯಕ್ರಮ ನಿರ್ವಹಿಸಿದರು.