ಹಿರೇಕೆರೂರ: ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದು ಬೆಳೆಯು ನೇರಳೆ ಮತ್ತು ಹಳದಿ ಬಣ್ಣಕ್ಕೆ ತಿರುಗಿದ್ದು, ರೈತರು ಹತೋಟಿಗಾಗಿ ಲಘು ಪೋಷಕಾಂಶಗಳ ಮಿಶ್ರಣ ಸಿಂಪಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ವಿ.ಮಂಜುನಾಥ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಬುಧವಾರ ರೈತರಿಗೆ ಮಾಹಿತಿ ನೀಡಿದ ಅವರು, ಮಳೆ ತಡವಾಗಿ ಬಂದಿರುವ ಕಾರಣ ಬಿತ್ತನೆಯೂ ತಡವಾಗಿದೆ ಹಾಗೂ ಬಿಡುವಿಲ್ಲದೆ ಸುರಿದ ಮಳೆಯಿಂದ ತೇವಾಂಶ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದಿದೆ. ಬೆಳೆಯು ನೇರಳೆ ಮತ್ತು ಹಳದಿ ಬಣ್ಣಕ್ಕೆ ತಿರುಗಿದ್ದು, ರೈತರು ಹತೋಟಿಗಾಗಿ ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 19:19:19 ಮತ್ತು 13:0:45 ಇವುಗಳನ್ನು ಬೆಳೆ ಸಣ್ಣದಿದ್ದಲ್ಲಿ ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಮತ್ತು ಬೆಳೆ ದೊಡ್ಡದಿದ್ದಲ್ಲಿ ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಮತ್ತು ಲಘು ಪೋಷಕಾಂಶಗಳ ಮಿಶ್ರಣ 12 ರಿಂದ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.
ಲದ್ದಿ ಹುಳುವಿನ ಬಾಧೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ಇಮಾಮೆಕ್ಟೀನ್ ಬೆಂಜೋಯೇಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯ ಒಳಗೆ ದ್ರಾವಣ ಬೀಳುವಂತೆ ಸಿಂಪಡಿಸಬೇಕು. ಅಲ್ಲದೆ ಮೆಟಾರೈಜಿಯಂ ರಿಲೇ ಜೈವಿಕ ಪೀಡೆನಾಶಕವನ್ನು ಪ್ರತಿ ಲೀಟರ್ ನೀರಿಗೆ 3 ಗ್ರಾಂ ಬೆರೆಸಿ ಸುಳಿಯಲ್ಲಿ ಬಿಡುವುದರಿಂದ ಕೀಟ ಬಾಧೆ ನಿಯಂತ್ರಿಸಬಹುದು. ಜಮೀನಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಎಡೆಕುಂಟೆ ಮತ್ತು ದಿಂಡು ಏರಿಸಬೇಕು. ಪ್ರತಿ ಎಕರೆಗೆ ಕೇವಲ 15 ಕೆ.ಜಿ ಯೂರಿಯಾ ಬಳಸುವಂತೆ ರೈತರಿಗೆ ಸಲಹೆ ನೀಡಿದ್ದಾರೆ.