ಹುಬ್ಬಳ್ಳಿ: ಪೊಲೀಸರು ಒತ್ತಡದಿಂದ ಪ್ರತಿನಿತ್ಯ ಕೆಲಸ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಕ್ರೀಡಾಕೂಟ ಆಯೋಜನೆ ಮಾಡಿರುವುದು ಸಮಂಜಸವಾಗಿದೆ. ಕ್ರೀಡೆ ಎಂದಾಕ್ಷಣ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಉತ್ಸಾಹ ಇಮ್ಮಡಿಯಾಗುತ್ತದೆ. ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾಕೂಟಗಳು ಸಹಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.
ನಗರದ ಗೋಕುಲ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕದ ವತಿಯಿಂದ ಬುಧವಾರ ಏರ್ಪಡಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪ್ರಗತಿಯ ಸಂಕೇತವಾಗಿ ಪಾರಿವಾಳ ಹಾಗೂ ತ್ರಿವರ್ಣ ಬಲೂನುಗಳನ್ನು ಗಾಳಿಯಲ್ಲಿ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಒತ್ತಡದಿಂದ ಹೊರಬರಲು ವ್ಯಾಯಾಮ ತುಂಬಾ ಅವಶ್ಯಕ. ಸಮಾಜದಲ್ಲಿನ ನಾಗರಿಕರು ಕಾನೂನು ಪರಿಪಾಲನೆ ಮಾಡಬೇಕಿದೆ. ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ತಾಳ್ಮೆ ಹಾಗೂ ಶಿಸ್ತನ್ನು ಕ್ರೀಡೆಯಿಂದ ಕಲಿಯಬಹುದು. ಅಲ್ಲದೇ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಕಲಿಸುತ್ತದೆ ಎಂದರು.
ಹು- ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ವೃತ್ತಿಯ ಜತೆಗೆ ಆಟೋಟಗಳಲ್ಲಿ ಪೊಲೀಸರು ಭಾಗವಹಿಸಬೇಕು. ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿ ದೈಹಿಕವಾಗಿ ಸದೃಢರಾಗಲು ಮುಂದಾಗಬೇಕು. ತಂಡದ ಸ್ಫೂರ್ತಿಯನ್ನು ಮೂಡಿಸಲು ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತದೆ ಎಂದರು.
ಕಳೆದ 14 ವರ್ಷಗಳಿಂದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ವಿಜೇತರಾಗಿರುವ ಐ.ಎಸ್. ದೇಸಾಯಿ ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು.
ಸಿಎಆರ್ ವಿಭಾಗ, ಉತ್ತರ ವಿಭಾಗ, ದಕ್ಷಿಣ ವಿಭಾಗ, ಸಂಚಾರ ವಿಭಾಗ, ಮಹಿಳಾ ವಿಭಾಗ ಹಾಗೂ ಧಾರವಾಡ ವಿಭಾಗದ ತಂಡಗಳು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದವು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಡಿಸಿಪಿಗಳಾದ ಎಂ. ರಾಜೀವ, ರವೀಶ ಸಿ.ಆರ್., ಯಲ್ಲಪ್ಪ ಕಾಶಪ್ಪನವರ, ಎಸಿಪಿಗಳಾದ ಬಲ್ಲಪ್ಪ ನಂದಗಾವಿ, ವಿನೋದ ಮುಕ್ತೇದಾರ, ಆರ್.ಕೆ. ಪಾಟೀಲ ಇತರರು ಇದ್ದರು.
ಪೊಲೀಸ್ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು.