ಜಿಲ್ಲೆ

ಉದ್ಯೋಗದಾತರಾಗಲು ಸಲಹೆ

ಹುಬ್ಬಳ್ಳಿ: ಎಲ್ಲರೂ ಉದ್ಯೋಗಿಗಳಾಗಲು ಇಚ್ಛಿಸುವುದಕ್ಕಿಂತ ಸ್ವಂತ ಉದ್ಯೋಗ ಆರಂಭಿಸಿ ಉದ್ಯೋಗದಾತರಾಗಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಸಲಹೆ ನೀಡಿದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ಉದ್ಯೋಗ ಮಾಹಿತಿ ಹಾಗೂ ತರಬೇತಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಇಲ್ಲಿಯ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜ್ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗಕ್ಕಾಗಿ ಯುವಕರು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಉದ್ಯೋಗ ಮೇಳ ಆಯೋಜಿಸುತ್ತ ಬಂದಿವೆ. ಉದ್ಯೋಗ ಬೆಂಗಳೂರಿಗೆ ಹೋದರೆ ಸಿಗುತ್ತದೆ ಎಂಬ ಆಶಾಭಾವನೆ ನಮ್ಮ ಯುವಕರಲ್ಲಿದೆ. ಈ ನಿಟ್ಟಿನಲ್ಲಿ ಇಂತಹ ಉದ್ಯೋಗ ಮೇಳಗಳು ನಮ್ಮ ಭಾಗದತ್ತ ಆಗಮಿಸಬೇಕಿದೆ ಎಂದರು.

ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಪದವಿ ಮುಗಿದ ತಕ್ಷಣ ವಿದ್ಯಾರ್ಥಿಗಳ ಪ್ರಮುಖ ಘಟ್ಟ ಉದ್ಯೋಗ. ಇದನ್ನು ಪಡೆಯಲು ಬಹಳಷ್ಟು ವಿದ್ಯಾರ್ಥಿಗಳು ಬಹಳಷ್ಟು ಶ್ರಮಪಡುತ್ತಾರೆ. ಸಿಕ್ಕ ಉದ್ಯೋಗ ಪಡೆದು ಅಲ್ಲಿಯೇ ಕೌಶಲ ಪಡೆದು ಇತರ ಕಂಪನಿಗಳಲ್ಲಿ ಉನ್ನತ ಹುದ್ದೆ ಪಡೆಯಲು ಶ್ರಮಿಸಬೇಕು ಎಂದರು.

ಉದ್ಯೋಗ ಮೇಳ ಆಯೋಜಕರು ಹಾಗೂ ಎಂಎಲ್‌ಸಿ ಪ್ರೊ.ಎಸ್.ವಿ. ಸಂಕನೂರ ಮಾತನಾಡಿ, ಗದಗ, ಧಾರವಾಡ, ಹಾವೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸುವುದಾಗಿ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದೆ. ಅದೇ ರೀತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಉದ್ಯೋಗ ಮೇಳ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಸಜಲ್ ಸಮೀರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಮಂಜುನಾಥ ಹೊಸಮನಿ ಮಾತನಾಡಿದರು.

ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಬಾಪುಗೌಡ ಪಾಟೀಲ, ಕಾರ್ಯದರ್ಶಿ ಎ.ವಿ. ಸಂಕನೂರ, ಪ್ರಾಚಾರ್ಯೆ ಡಾ. ಸಂಧ್ಯಾ ಕುಲಕರ್ಣಿ ಇತರರು ಇದ್ದರು.