ಹನೂರು: ಸಮುದಾಯದ ಕುಲಸ್ಥರ ತೀರ್ಮಾನದಂತೆ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸೋಣ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಸಭಾಂಗಣದಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ಆಯೋಜಿಸಿದ್ದ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ಆದೇಶದಂತೆ ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಸಂಬಂಧ 15 ದಿನಗಳ ಮುಂಚಿತವಾಗಿಯೇ ಸಭೆ ಏರ್ಪಡಿಸಿ ಚರ್ಚಿಸಬೇಕಿತ್ತು. ಆದರೆ ಕೆಲವು ನ್ಯೂನತೆಯಿಂದ ಇದೀಗ ಸಭೆ ಕರೆಯಲಾಗಿದ್ದು, ಸಿದ್ಧತೆ ಮಾಡಿಕೊಳ್ಳಲು ಸಮಸ್ಯೆಯಾಗಿದೆ. ಇದರಿಂದ ಸಮುದಾಯದ ಮುಖಂಡರು ಬೇಸರವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮಹಾನ್ ನಾಯಕರ ಜಯಂತಿ ಆಚರಣೆ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅವರಿಗೆ ಸೂಚಿಸಿದರು.
ಇದಕ್ಕೂ ಮೊದಲು ಪಪಂ ಸದಸ್ಯ ಗಿರೀಶ್ ಮಾತನಾಡಿ, ತಾಲೂಕಿನ ಗ್ರಾಮಗಳಲ್ಲಿ ಸಮುದಾಯದ ಮುಖಂಡರಿದ್ದಾರೆ. ಆದರೆ ಈ ಪೂರ್ವಭಾವಿ ಸಭೆಗೆ ಪಟ್ಟಣದ ಕೆಲ ಮುಖಂಡರನ್ನು ಮಾತ್ರ ಆಹ್ವಾನಿಸಿರುವುದು ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರೆ, ಮುಖಂಡ ಮಂಜೇಶ್ ಮಾತನಾಡಿ, ಕಳೆದ ಬಾರಿ ಕೆಲವು ಸರ್ಕಾರಿ ಕಚೇರಿಗಳಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಿಸಿರಲಿಲ್ಲ. ಹಾಗಾಗಿ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿದರೆ ಏನು ಪ್ರಯೋಜನ. ಹಾಗಾಗಿ ಜಯಂತಿಯನ್ನು ಆಚರಿಸುವುದೇ ಬೇಡ. ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ನೆರೆದಿದ್ದ ಮುಖಂಡರನ್ನು ಮನವೊಲಿಸಿದ ಶಾಸಕರು, ನಿಮ್ಮ ಇಚ್ಛೆಯಂತೆ ಕುಲಸ್ಥರ ಸಭೆ ಕರೆದು ಚರ್ಚಿಸಿ ದಿನಾಂಕ ನಿಗದಿಪಡಿಸಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಪಟ್ಟಣದಲ್ಲಿ ಕೆಂಪೇಗೌಡ ವೃತ್ತ ನಿರ್ಮಾಣ ಸಂಬಂಧ ಚರ್ಚಿಸಲಾಯಿತು.
ಸಭೆಯಲ್ಲಿ ಬಿಇಒ ಮಹೇಶ್, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮ್ಮಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದರಮ್ಮ, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಶಿರಸ್ತೇದಾರ್ ನಾಗೇಂದ್ರ, ಪಪಂ ಸದಸ್ಯರಾದ ಹರೀಶ್‌ಕುಮಾರ್, ಆನಂದ್, ಮುಖಂಡರಾದ ನಾಗೇಂದ್ರ, ಮಂಜೇಶ್, ಲಿಂಗರಾಜು, ಸತೀಶ್, ಗೋವಿಂದೇಗೌಡ ಮತ್ತಿತರರು ಹಾಜರಿದ್ದರು.