ಜಿಲ್ಲೆ

ಮೆಟ್ರೋ ಕಂಬಗಳಲ್ಲಿ ಜಾಹೀರಾತು!

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಏಳು ವರ್ಷಗಳ ಬಳಿಕ ನಗರದ ಮೆಟ್ರೋ ಕಂಬಗಳ ಮೇಲೆ ಜಾಹೀರಾತುಗಳು ಮತ್ತೆ ಮರಳಿ ಬರುವ ಸಾಧ್ಯತೆ ಇದ್ದು. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಹೊಸದಾಗಿ ಟೆಂಡರ್​ ಕರೆಯುವ ಮೂಲಕ ನೇರಳೆ, ಹಸಿರು, ಹಳದಿ ಮಾರ್ಗಗಳ ಜತೆಗೆ ಬರುವ ನೀಲಿ ಮತ್ತು ಗುಲಾಬಿ ಮಾರ್ಗಗಳಲ್ಲಿಯೂ ಸಾವಿರಾರು ಕಂಬಗಳನ್ನು ಜಾಹೀರಾತು ಬಳಕೆಗೆ ಬಿಡಲು ನಿರ್ಧರಿಸಿದೆ.

2018ರಲ್ಲಿ ನಿಷೇಧಕ್ಕಿಂತ ಮೊದಲು, ಮೆಟ್ರೋ ಕಂಬ ಜಾಹೀರಾತುಗಳಿಂದ ವರ್ಷಕ್ಕೆ ಸುಮಾರು 10 ಕೋಟಿ ರೂ. ಆದಾಯ ಬರುತ್ತಿತ್ತು. ಈಗ ಹೊಸ ಯೋಜನೆ ಮೂಲಕ ವರ್ಷಕ್ಕೆ 60ರಿಂದ 80 ಕೋಟಿ ರೂ. ಆದಾಯ ಲಭಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಈ ನಿರ್ಧಾರವು ಬೆಂಗಳೂರಿನ ಹೊರವಲಯ ಜಾಹೀರಾತು ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವುದರ ಜತೆಗೆ ನಗರ ಪಾಲಿಕೆಗಳಿಗೂ ಹೆಚ್ಚುವರಿ ಆದಾಯದ ಮಾರ್ಗವನ್ನು ತೆರೆಯಲಿದೆ.

ಕರ್ನಾಟಕ ಹೈಕೋರ್ಟ್​ ಟೀಕೆ ಮಾಡಿದ ನಂತರ, ನಗರದಲ್ಲಿ ಅತಿಯಾದ ಹೋರ್ಡಿಂಗ್​ ಹಾಗೂ ಫ್ಲೆಕ್ಸ್​ಗಳನ್ನು ತಡೆಯಲು ಬಿಬಿಎಂಪಿ ಎಲ್ಲ ಔಟ್​ಡೋರ್​ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

ಆದರೆ, 2025ರ ಫೆಬ್ರವರಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್​ ಮೆಟ್ರೋ ಕಂಬ ಜಾಹೀರಾತುಗಳಿಗೆ ಅವಕಾಶ ನೀಡುವುದಾಗಿ ಘೋಷಿಸಿ, ಅದರ ಆದಾಯವನ್ನು ಬಿಎಂಆರ್​ಸಿಎಲ್​ ಹಾಗೂ ಪಾಲಿಕೆಗಳು ಸಮನಾಗಿ ಹಂಚಿಕೊಳ್ಳಬೇಕು ಎಂದು ಸೂಚಿಸಿದರು. ಬಳಿಕ ಜುಲೈನಲ್ಲಿ, ಬಿಬಿಎಂಪಿ "ಜಾಹೀರಾತು ಉಪನಿಯಮ 2024" ಅನ್ನು ಹೊರಡಿಸಿ, ಗ್ರೇಟರ್​ ಬೆಂಗಳೂರು ಪ್ರದೇಶದಲ್ಲಿ ಜಾಹೀರಾತುಗಳ ಗಾತ್ರ, ಅಂತರ ಹಾಗೂ ಇತರ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸಿದರು.

ಆದಾಯ ಯೋಜನೆಗಳು

ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಸುವ ಮೂಲಕ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ಟಿಕೇಟೇತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ನಡೆಸಿದೆ. ಈಗಾಗಲೇ ಮೆಟ್ರೋ ರೈಲುಗಳಲ್ಲಿ ಜಾಹೀರಾತಿಗೆ ಅವಕಾಶ ನೀಡಲಾಗಿದೆ. ಅಲ್ಲದೆ, ಶೌಚಗೃಹಗಳಿಗೂ ಶುಲ್ಕ ವಿಧಿಸಿತ್ತು. ಮತ್ತೆ ಪ್ರಯಾಣಿಕರ ಆಕ್ರೋಶ, ಪ್ರತಿಭಟನೆ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು. ಮೆಟ್ರೋ ನಿಲ್ದಾಣಗಳಲ್ಲಿ ವಾಣಿಜ್ಯ ಅಂಗಡಿಗಳಿಗೆ ಜಾಗ ಬಾಡಿಗೆ ನೀಡುವುದು, ಎಟಿಎಂ ಹಾಗೂ ಪಾರ್ಕಿಂಗ್​ ಪ್ರದೇಶಗಳನ್ನು ಬಿಡುವುದು, ಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡುವುದು ಮೊದಲಾದವು ಆದಾಯ ಹೆಚ್ಚಿಸುವ ಭಾಗವಾಗಿದೆ. ನಿಲ್ದಾಣದೊಳಗಿನ ಕಿಯೋಸ್ಕ್​ ಜಾಹೀರಾತುಗಳು, ಚಾರ್ಜಿಂಗ್​ ಸ್ಟೇಷನ್​ಗಳು ಹಾಗೂ ಫೈಬರ್​ ಕೇಬಲ್​ಗಳೊಂದಿಗೆ ಟೆಲಿಕಾಂ ಟವರ್​ಗಳ ಸ್ಥಾಪನೆಯೂ ಮೆಟ್ರೋ ಆದಾಯಕ್ಕೆ ಹೊಸ ಕೊಡುಗೆಯನ್ನು ನೀಡುತ್ತಿದೆ.