ಚಿಕ್ಕೋಡಿ ಪಟ್ಟಣದಲ್ಲಿ ಸಾರಿಗೆ ಸಂಸ್ಥೆಯ ನೌಕರರು ಶನಿವಾರ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಮುಂದುವರಿದ ಸಾರಿಗೆ ನೌಕರರ ಪ್ರತಿಭಟನೆ

Belagavi

ಚಿಕ್ಕೋಡಿ: ಸಾರಿಗೆ ನೌಕರರು ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸು ವಂತೆ ಕೆಲಸದಿಂದ ದೂರ ಉಳಿದು ಚಿಕ್ಕೋಡಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಉಪವಿಭಾಗದಲ್ಲಿ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಪಟ್ಟಣಕ್ಕೆ ಆಗಮಿ ಸಿದ ಪ್ರಯಾಣಿಕರು ಪರದಾಡಿದರು. ಚಿಕ್ಕೋಡಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸೇರಿದ ನೌಕರರು ಇಡೀ ದಿನ ಮುಷ್ಕರ ನಡೆಸಿದರು. 3 ಸಾವಿರಕ್ಕಿಂತ ಹೆಚ್ಚು ಕೆಎಸ್‌ಆರ್‌ಟಿಸಿ ನೌಕರರು ಕೆಲಸದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 540ಕ್ಕೂ ಹೆಚ್ಚು ಬಸ್ ಸಂಚಾರ ಸ್ಥಗಿತಗೊಂಡಿದ್ದವು. ಚಿಕ್ಕೋಡಿ ಘಟಕಕ್ಕೆ 45 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬಾರಿ ಹಣ ನೀಡಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂತು.

ರಾಯಬಾಗ ವರದಿ: ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೈಗೊಂಡಿರುವ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಕೂಡ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪ್ರಯಾಣಿಕರು ಪರದಾಡುವಂತಾಯಿತು.

ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಇಲ್ಲದೆ ಪಟ್ಟಣದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ರಸ್ತೆಗೆ ಇಳಿಯದ ಬಸ್‌ಗಳು ಹೊಸ ಬಸ್ ನಿಲ್ದಾಣದಲ್ಲಿ ಸಾಲಾಗಿ ನಿಂತಿರುವುದು ಕಂಡು ಬಂದಿತು. ಕೆಲವೊಂದು ಪ್ರಯಾಣಿಕರು, ತುರ್ತು ಕೆಲಸ ಕಾರ್ಯಗಳ ನಿಮಿತ್ತ ದುಬಾರಿ ಹಣ ತೆತ್ತು ಖಾಸಗಿ ವಾಹನ ಬಾಡಿಗೆ ಪಡೆದು ತೆರಳುತ್ತಿದ್ದರು.

ಪರದಾಡಿದ ಪ್ರಯಾಣಿಕರು

ಎರಡು ದಿನಗಳಿಂದ ಸಾರಿಗೆ ಸಂಸ್ಥೆಯ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮುಷ್ಕರದಲ್ಲಿ ಪಟ್ಟಣದ ವಾಯವ್ಯ ಸಾರಿಗೆ ಸಂಸ್ಥೆಯ ಘಟಕದ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಖಾನಾಪುರ ಸಾರಿಗೆ ಘಟಕದಲ್ಲಿ ಶನಿವಾರವೂ ಸಹ ಬಸ್‌ಗಳು ಕಾರ್ಯಾಚರಣೆ ನಡೆಸಲಿಲ್ಲ. ಇದರಿಂದ ತಾವು ಉದ್ದೇಶಿಸಿದ ಸ್ಥಳಗಳಿಗೆ ಪ್ರಯಾಣಿಸಲು ಸಾಧ್ಯವಾಗದ್ದರಿಂದ ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗದ ಪ್ರಯಾಣಿಕರು ಪರದಾಡಿದರು. ಕೆಲ ಸಾರ್ವಜನಿಕರು ಅನಿವಾರ್ಯವಾಗಿ
ಖಾಸಗಿ ವಾಹನಗಳತ್ತ ಮುಖ ಮಾಡಿದರು.