ಜಿಲ್ಲೆ

ಮುಂದುವರಿದ ಕರೊನಾ ಅಬ್ಬರ

ಬೆಳಗಾವಿ: ಜಿಲ್ಲೆಯಲ್ಲಿ ಬುಧವಾರವೂ ಕರೊನಾ ರೌದ್ರಾವತಾರ ಮುಂದುವರಿದಿದ್ದು, 41 ಜನರಲ್ಲಿ ವೈರಸ್ ದೃಢವಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 604ಕ್ಕೆ ಏರಿಕೆಯಾಗಿದೆ. ಹಿಂಡಲಗಾ ಜೈಲಿನ 11 ಕೈದಿಗಳಲ್ಲಿಯೂ ಸೋಂಕು ದೃಢವಾಗಿದೆ. ಇದರಿಂದ ಸಿಬ್ಬಂದಿಗೂ ಭಯ ಮೂಡಿದೆ.

ಬೆಳಗಾವಿ ಅಂಬೇಡ್ಕರ್ ಗಲ್ಲಿ, ಮಾಲಿ ಗಲ್ಲಿ, ನಾನಾವಾಡಿ, ಅನಗೋಳ, ಅಂಬೇಡ್ಕರ್ ನಗರ, ಮಜಗಾಂವ, ಬೆಳಗಾವಿ ನಗರದಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ. ವಂಟಮುರಿ ಕಾಲನಿಯಲ್ಲಿ 5 ಜನರಿಗೆ ಸೋಂಕು ತಗುಲಿದೆ. ಸದಾಶಿವ ನಗರದ ಬಾಲಕಿಯರ ವಸತಿ ನಿಲಯದ 4 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅಥಣಿಯಲ್ಲಿ 3, ಅಥಣಿ ತಾಲೂಕಿನ ಜುಗೂಳ, ಕಾಗವಾಡದಲ್ಲಿ 1 ವೈರಸ್ ದೃಢವಾಗಿದೆ. ರಾಯಬಾಗ ತಾಲೂಕು ಕುಡಚಿ ಮುಜಾವರ್ ಗಲ್ಲಿಯ 4 ಜನರು, ಕುಡಚಿ ಪೊಲೀಸ್ ಠಾಣೆ ಹತ್ತಿರ 1 ಪ್ರಕರಣ ಪತ್ತೆಯಾಗಿದೆ. ಗೋಕಾಕ ತಾಲೂಕಿನ ದುರದುಂಡಿಯಲ್ಲಿ 1, ಸವದತ್ತಿ ಗಡೇಕರ ಓಣಿಯಲ್ಲಿ 1, ನಿಪ್ಪಾಣಿಯಲ್ಲಿ 1, ಶಾಂತಿ ನಗರದಲ್ಲಿ 1 ಪ್ರಕರಣ ದೃಢವಾಗಿದೆ. ಬೆಳಗಾವಿಯಲ್ಲಿ ಕ್ವಾರಂಟೈನ್ ಮಾಡಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳದ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

366 ಸೋಂಕಿತರು ಗುಣಮುಖ: ಜಿಲ್ಲೆಯಲ್ಲಿ 3,136 ಶಂಕಿತರ ಗಂಟಲು ದ್ರವದ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಕರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 33,380 ಜನರ ಮೇಲೆ ನಿಗಾ ವಹಿಸಲಾಗಿದೆ. 7,245 ಜನರು 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 10,018 ಜನ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 15,893 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 32,084 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ.

27,744 ಮಾದರಿ ವರದಿ ನೆಗೆಟಿವ್ ಬಂದಿವೆ. 366 ಸೋಂಕಿತರು ಗುಣಮುಖರಾಗಿದ್ದಾರೆ. 224 ಕರೊನಾ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಬ್ಬರು ಸಾವು?: ಬುಧವಾರ ಕರೊನಾ ಶಂಕಿತ ಇಬ್ಬರು ಮೃತಪಟ್ಟಿದ್ದಾರೆ. ಬಸವ ಕಾಲನಿಯ 74 ವರ್ಷದ ವೃದ್ಧ, ಅಥಣಿಯ 58 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.