ಮಂಜುನಾಥ ಕೋಳಿಗುಡ್ಡ
ಬೆಳಗಾವಿ: ಪ್ರಯಾಣಿಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಿರುವ ಪ್ರೀಪೇಯ್ಡ ಆಟೋ ಕೌಂಟರ್ ಇದ್ದೂ ಇಲ್ಲದಂತಾಗಿದ್ದು, ನಗರಕ್ಕೆ ಪೊಲೀಸ್ ಕಮಿಷನರೇಟ್ ಬಂದರೂ ‘ಆಟೋ’ಟೋಪ ನಿಂತಿಲ್ಲ.
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಂಪರ್ಕ ಹೊಂದಿರುವ ಬೆಳಗಾವಿ ಮಹಾನಗರದಲ್ಲಿ ದಶಕ ಕಳೆದರೂ ಆಟೋ ಮೀಟರ್, ಪ್ರೀಪೇಯ್ಡ ಆಟೋ ಸೇವೆ ಆರಂಭವಾಗಿಲ್ಲ. ದೂರದೂರಿನಿಂದ ಬರುವ ಪ್ರಯಾಣಿಕರು, ಪ್ರವಾಸಿಗರು ಆಟೋ ಚಾಲಕರ ಬೇಕಾಬಿಟ್ಟಿ ದರದಿಂದಾಗಿ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಮಹಾನಗರದಲ್ಲಿ ನಿತ್ಯ ಸುಮಾರು 6,850 ಆಟೋಗಳು ಸಂಚರಿಸುತ್ತಿದ್ದು, ಬಹುತೇಕ ಆಟೋಗಳಿಗೆ ಮೀಟರ್, ದರ ಪಟ್ಟಿ ಇಲ್ಲ. ಹಗಲು ವೇಳೆ 1 ರಿಂದ 2 ಕಿಲೋಮೀಟರ್ ಪ್ರಯಾಣಕ್ಕೆ 60 ರಿಂದ 80 ರೂ. ಮತ್ತು ರಾತ್ರಿ ಸಮಯದಲ್ಲಿ 150 ರಿಂದ 200 ರೂ.ವರೆಗೆ ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದಾರೆ.
ಕೆಲವೆಡೆ ಕೇಳಿದಷ್ಟು ಹಣ ಕೊಡದಿರುವುದಕ್ಕೆ ಪ್ರಯಾಣಿಕರನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೋಗಿರುವ ಘಟನೆಗಳು ಈಚೆಗೆ ರಾಣಿ ಚನ್ನಮ್ಮ ನಗರ, ರಾಮತೀರ್ಥ ನಗರದಲ್ಲಿ ನಡೆದಿವೆ. ಆದರೆ, ಜಿಲ್ಲಾಡಳಿತ, ಪೊಲೀಸರು ಇಲ್ಲಿಯವರೆಗೆ ಆಟೋ ಮೀಟರ್ ಅಳವಡಿಕೆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.
2015ರಲ್ಲಿದ್ದ ಜಿಲ್ಲಾಧಿಕಾರಿ ಎನ್.ಜಯರಾಂ ಮತ್ತು ಪೊಲೀಸ್ ಆಯುಕ್ತ ಎಸ್. ರವಿ ಅವರು ನಗರದಲ್ಲಿ ಆಟೋ ಮೀಟರ್ ಕಡ್ಡಾಯ ಹಾಗೂ ಪ್ರೀಪೇಯ್ಡ ಆಟೋ ಸೆಂಟರ್ ಸೇವೆ ಆರಂಭಿಸಿದ್ದರು. ಆದರೆ, ಆರಂಭವಾದ ಕೇವಲ 4 ದಿನಗಳ ಬಳಿಕ ಬಂದ್ ಆಗಿರುವ ಪ್ರೀಪೇಯ್ಡ ಆಟೋ ಸೆಂಟರ್‌ಗಳು ಇಂದಿಗೂ ಆರಂಭಗೊಂಡಿಲ್ಲ. ಮತ್ತೊಂದೆಡೆ ಆಟೋ ಮೀಟರ್ ಕಡ್ಡಾಯಗೊಳಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ತದನಂತರ ಮೀಟರ್ ಇಲ್ಲದೆ ಆಟೋಗಳು ಸಂಚರಿಸಲು ಆರಂಭಿಸಿದವು. ಇಲ್ಲಿಯವರೆಗೆ ಸಂಚಾರಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರ ಸಂಗತಿ.
ಆರ್‌ಟಿಒ ಮತ್ತು ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ ನಗರದಲ್ಲಿ ಸಂಚರಿಸುತ್ತಿರುವ ಸುಮಾರು 6 ಸಾವಿರ ಆಟೋಗಳ ಪೈಕಿ 3 ಸಾವಿರಕ್ಕೂ ಅಧಿಕ ಆಟೋಗಳಿಗೆ ಸೂಕ್ತ ದಾಖಲೆಗಳು ಇಲ್ಲ. 10 ರಿಂದ 20 ಆಟೋಗಳಿಗೆ ಒಬ್ಬರೇ ಮಾಲೀಕರಿದ್ದಾರೆ. ಅವರೆಲ್ಲರೂ ಪ್ರಭಾವಿ, ರಾಜಕೀಯ ನಾಯಕರ ಬೆಂಬಲಿತ ವ್ಯಕ್ತಿಗಳಿದ್ದಾರೆ. ದಿನದ ಬಾಡಿಗೆ ಆಧಾರದ ಮೇಲೆ ಆಟೋಗಳನ್ನು ಬಾಡಿಗೆ ನೀಡುತ್ತಿದ್ದಾರೆ. ಪರಿಣಾಮ ಅನಧಿಕೃತ ಆಟೋಗಳ ವಿರುದ್ಧ ಕ್ರಮ ಕೈಗೊಳ್ಳಲು ಕಷ್ಟವಾಗುತ್ತಿದೆ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
7 ವರ್ಷಗಳಿಂದ ನಗರದಲ್ಲಿ ಪ್ರೀಪೇಯ್ಡ ಕೇಂದ್ರ ಆರಂಭವಾಗಿ 9 ತಿಂಗಳ ಅವಧಿಯಲ್ಲಿ ಸುಮಾರು 345 ಜನರು ಟಿಕೆಟ್ ಪಡೆದು ಪ್ರಯಾಣಿಸಿದ್ದರು. ಬಳಿಕ ಸಾರ್ವಜನಿಕರು ಪ್ರೀಪೇಯ್ಡ ಆಟೋ ಬಳಸದಿರುವ ಕಾರಣ ಕೇಂದ್ರಗಳು ಬಂದ್ ಆಗಿವೆ. ಆಟೋ ಮೀಟರ್ ದರ ಹೆಚ್ಚಳವಾಗಿರುವ ಕುರಿತು ಸಾರ್ವಜನಿಕರು ದೂರುತ್ತಿರುವ ಹಿನ್ನೆಲೆಯಲ್ಲಿ ಅನುಷ್ಠಾನಕ್ಕೆ ತರುವುದು ಕಷ್ಟವಾಗುತ್ತಿದೆ ಎಂದು ಪೊಲೀಸರು, ಆರ್‌ಟಿಒ ಅಧಿಕಾರಿಗಳು ತಿಳಿಸಿದ್ದಾರೆ.
ಆಟೋರಿಕ್ಷಾಗಳಿಂದಲೂ ಹೆಚ್ಚುತ್ತಿದೆ ಸಂಚಾರ ದಟ್ಟಣೆ: ಮಹಾನಗರ ಸಂಚರಿಸುತ್ತಿರುವ ಸುಮಾರು ಆರು ಸಾವಿರಕ್ಕೂ ಆಟೋಗಳಿಂದಲೂ ಪಾರ್ಕಿಂಗ್, ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ. ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸರ್ಕಲ್‌ಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ ಬೇಕಾಬಿಟ್ಟಿ ಆಟೋಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ರಸ್ತೆ ಎರಡು ಬದಿಯಲ್ಲಿ ಆಟೋಗಳು ಪಾರ್ಕಿಂಗ್ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿರುವ ಆಟೋಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ವ್ಯಾಪಾರಿಗಳಾದ ವಿಠ್ಠಲ ಕಂಕಣವಾಡಿ, ಮಾರುತಿ ಅನಗೋಳಕರ ದೂರಿದ್ದಾರೆ.
ಬೆಳಗಾವಿ ನಗರದಲ್ಲಿ ಆಟೋ ಚಾಲಕರು ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಶೀಘ್ರ ಸಮಸ್ಯೆ ಇತ್ಯರ್ಥಪಡಿಸುತ್ತೇವೆ. ಅಲ್ಲದೆ, ಆಟೋ ಮೀಟರ್ ಕಡ್ಡಾಯಗೊಳಿಸಲುಕ್ರಮ ವಹಿಸಲಾಗುತ್ತದೆ.| ಎಸ್.ಎನ್.ಸಿದ್ದರಾಮಪ್ಪ ಮಹಾನಗರ ಪೊಲೀಸ್ ಆಯುಕ್ತ, ಬೆಳಗಾವಿ