ಜಿಲ್ಲೆ

ಕಲಬೆರಕೆ ಜೇನು ಮಾರಾಟ ಜಾಲ ಪತ್ತೆ : ಐವರು ಮಹಿಳೆಯರ ಸಹಿತ 8 ಮಂದಿ ಪೊಲೀಸ್ ವಶ

ಸೌಮ್ಯ ಆರ್

ಗುರುಪುರ: ಕಲಬೆರಕೆ ಜೇನು ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಜಾಲವೊಂದು ಗುರುಪುರ ಕುಕ್ಕುದಕಟ್ಟೆಯಲ್ಲಿ ಗುರುವಾರ ಸಾರ್ವಜನಿಕರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಎರಡು ಬಕೆಟ್ ನಕಲಿ ಜೇನಿನೊಂದಿಗೆ ಐವರು ಮಹಿಳೆಯರ ಸಹಿತ 8 ಮಂದಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಕ್ಕುದಕಟ್ಟೆಯಲ್ಲಿ ಫಲ್ಗುಣಿ ನದಿ ತೀರದಲ್ಲಿರುವ ಗ್ರಾಮೀಣ ಕುಡಿಯುವ ನೀರಿನ ರೇಚಕ ಸ್ಥಾವರದ(ಪಂಪ್ ಹೌಸ್) ಮೇಲ್ಗಡೆ ಇದ್ದ ಜೇನು ತೆಗೆಯಲೆಂದು ಬುಧವಾರ ಆಟೋದಲ್ಲಿ ಆಗಮಿಸಿದ ಒಡಿಶಾ ಮೂಲದ ತಂಡ, ‘ಜೇನು ಕಡಿಯುತ್ತದೆ, ಎಲ್ಲರೂ ಬೇರೆಡೆಗೆ ಹೋಗಿ’ ಎಂದು ಹೇಳಿ ಜೇನುಹುಟ್ಟಿಂದ ಜೇನು ತೆಗೆಯಲು ಮುಂದಾಗಿದ್ದಾರೆ. ಆದರೆ ಅದರಲ್ಲಿ ಜೇನಿಲ್ಲದಿದ್ದರೂ, ‘ಎರಡು ಬಕೆಟ್ ಜೇನು ಸಿಕ್ಕಿದೆ’ ಎಂದು ಸ್ಥಳೀಯರಲ್ಲಿ ಹೇಳಿದ್ದರು. ಗ್ಯಾಂಗ್ ಸದಸ್ಯರು ತಾವು ಮೊದಲೇ ತಂದಿದ್ದ ಬಕೆಟ್‌ನಲ್ಲಿದ್ದ ನಕಲಿ ಜೇನಿಗೆ ಅಲ್ಲಿ ಸಿಕ್ಕಿದ ಅತ್ಯಲ್ಪ ಜೇನು ಮಿಕ್ಸ್ ಮಾಡಿದ್ದರು. ಬಳಿಕ ಇದನ್ನೇ ತಾಜಾ ಜೇನು ಎಂದು ಹೇಳಿ ಒಬ್ಬೊಬ್ಬರಿಗೆ 2,500 ರೂ.ಗೆ ಮಾರಾಟ ಮಾಡಿದ್ದಾರೆ.

ಪಂಪ್‌ಹೌಸ್ ಸಿಬ್ಬಂದಿ ಈ ಹಿಂದೆಯೇ ಖರೀದಿಸಿದ್ದ ಒಂದು ಬಾಟಲಿ ಜೇನು ನಾಪತ್ತೆಯಾಗಿತ್ತು. ಈ ಬಗ್ಗೆ ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದಾಗ ಗ್ಯಾಂಗ್ ಸದಸ್ಯನೊಬ್ಬ ಜೇನು ಕದ್ದು, ಕಲಬೆರಕೆ ಜೇನಿದ್ದ ಬಕೆಟ್‌ಗೆ ಸುರಿಯುತ್ತಿದ್ದುದು ಕಂಡು ಬಂದಿದೆ. ಮೇಲ್ನೋಟಕ್ಕೆ ಇದು ಕಲಬೆರಕೆ ಜೇನು ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಗ್ಯಾಂಗ್ ಸೆರೆಹಿಡಿಯಲು ಸ್ಥಳೀಯರು ಉಪಾಯ ಹೂಡಿ, ಕುಕ್ಕುದಕಟ್ಟೆಯಲ್ಲಿರುವ ಮತ್ತೊಂದು ಜೇನು ಹುಟ್ಟಿಂದ ಜೇನು ತೆಗೆಯುವಂತೆ ಕರೆ ಮಾಡಿದರು. ಗುರುವಾರ ಬೆಳಗ್ಗೆ ಗ್ಯಾಂಗ್ ಸದಸ್ಯರು ಸ್ಥಳಕ್ಕಾಗಮಿಸುತ್ತಿದಂತೆ ಗ್ರಾಹಕರು ತಾವು ಖರೀದಿಸಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ಕಲಬೆರಕೆ ಜೇನು ಮರಳಿಸಿ ಹಣ ವಾಪಸ್ ಪಡೆದಿದ್ದಾರೆ.