ಗುಳೇದಗುಡ್ಡ: ಸಮೀಪದ ಪರ್ವತಿ ಗ್ರಾಮದಲ್ಲಿ ನಾಯಿ ಮೇಲೆ ಚಿರತೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ, ಗಸ್ತು ತಿರುಗುತ್ತಿದ್ದಾರೆ. ಪಟ್ಟದಕಲ್ಲ ಹತ್ತಿರ ಇರಿಸಲಾಗಿದ್ದ ಬೋನು ಹತ್ತಿರ ಚಿರತೆಯು ಎರಡ್ಮೂರು ದಿನ ನೀರು ಕುಡಿದು ಹೋಗಿದೆ. ಆದರೆ ಬೋನಿನ ಬಳಿ ಜನರ ಓಡಾಟ ಹೆಚ್ಚಿದ್ದರಿಂದ ಅಲ್ಲಿಂದ ಪರ್ವತಿ ಗ್ರಾಮದ ಬಳಿ ಕಾಣಿಸಿಕೊಂಡಿದೆ.
ಚಿರತೆಯನ್ನು ಸೆರೆಯಿಡಿಲು ವಲಯ ಅರಣ್ಯಾಧಿಕಾರಿ ಮರೆಯನ್ನವರ, ಹೊಸಮನಿ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದು, ನಾಗರಾಳ ಎಸ್.ಪಿ., ಪರ್ವತಿ, ಕೆರೆ ಖಾನಾಪೂರ ಗ್ರಾಮಗಳಲ್ಲಿ ಗಸ್ತು ತಿರುಗುತ್ತಿದ್ದಾರೆ.
ಈ ಕುರಿತು ಮಾತನಾಡಿದ ಉಪವಲಯ ಅರಣ್ಯಾಧಿಕಾರಿ ಆರ್.ಎಸ್.ಹೊಸಮನಿ ಮಾತನಾಡಿ, ಎಂಟುತ್ತು ದಿನಗಳಿಂದ ಚಿರತೆ ಈ ಭಾಗದಲ್ಲಿ ಒಡಾಡುತ್ತಿದ್ದು, ಎರಡು ದಿನಗಳ ಹಿಂದೆ ರಾತ್ರಿ ಪರ್ವತಿ ಗ್ರಾಮದ ಹತ್ತಿರದ ಹೊಲದಲ್ಲಿದ್ದ ನಾಯಿಯ ಮೇಲೆ ದಾಳಿ ಮಾಡಿ ಗಾಯಗೊಳಸಿದೆ. ಚಿರತೆ ಹಿಡಿಯುವ ಸಲುವಾಗಿ ನಮ್ಮ ಸಿಬ್ಬಂದಿಗಳೊಂದಿಗೆ ನಿತ್ಯವು ಗಸ್ತು ತಿರುಗುತ್ತಿದ್ದೇವೆ. ಜನರು ಭಯಪಡಬಾರದು. ಚಿರತೆ ಕಾಣಿಸಿದರೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.