ಚಿಕ್ಕಮಗಳೂರು: ಮೊದಲೆಲ್ಲಾ ಆಹಾರ ಪದ್ಧತಿ ಆರೋಗ್ಯಕರವಾಗಿದ್ದು, ಜನರು ದೀರ್ಘಾಯುಷಿಗಳಾಗಿದ್ದರು. ಆದರೆ ಇಂದಿನ ದಿನಗಳಲ್ಲಿ ಸಾಂಪ್ರಾದಾಯಿಕ ಅಭ್ಯಾಸಗಳು ಮಾಯವಾಗಿ ನಮ್ಮ ಬದುಕು ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವುದು ಆರೋಗ್ಯಕ್ಕೆ ವ್ಯತಿರಿಕ್ತವಾಗಿದೆ. ಆದ್ದರಿಂದ ಪಾರಂಪರಿಕ ಆಭ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದು ಮಾಡೆಲ್ ಶಾಲೆ ಸಂಸ್ಥಾಪಕ ಹಾಗೂ ಪ್ರಾಚಾರ್ಯ ಎಂ.ಎನ್.ಷಡಾಕ್ಷರಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ನಡೆದ ಪಾರಂಪರಿಕ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಕ್ಕಿರೊಟ್ಟಿ, ರಾಗಿರೊಟ್ಟಿ, ರಾಗಿಮುದ್ದೆ, ಮೆಂತ್ಯಮುದ್ದೆ, ರಾಗಿಗಿಣ್ಣು, ಅಂಬಲಿ ಚಟ್ನಿಪುಡಿಗಳು, ಕಾರಚಟ್ನಿ, ತಾಲಿಪಟ್ಟು ಮಾಯವಾಗಿ ಅವುಗಳ ಜಾಗದಲ್ಲಿ ಪಿಜ್ಜಾ-ಬರ್ಗರ್, ಜಾಮ್-ಜೆಲ್ ಬಂದು ಕೂತಿವೆ. ಇವು ನಮ್ಮ ಆರೋಗ್ಯಕ್ಕೆ ವ್ಯತಿರಿಕ್ತವಾಗಿದೆ. ಆದ್ದರಿಂದ ಪಾರಂಪರಿಕ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೊದಲೆಲ್ಲಾ ಮನೆಯ ನೆಲವನ್ನು ಸಗಣಿಯಲ್ಲಿ ಸಾರಿಸುತ್ತಿದ್ದರು. ಗೋಡೆಯನ್ನು ಸುಣ್ಣದಿಂದ ಬಳಿಯುತ್ತಿದ್ದರು. ಸಗಣಿ ಮತ್ತು ಸುಣ್ಣದಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಶಕ್ತಿಯಿದೆ. ಬೆಳಗ್ಗೆ ಎದ್ದು ಭೂಮಿತಾಯಿಗೆ, ಸೂರ್ಯನಿಗೆ, ದೇವರಿಗೆ ಮತ್ತು ಹಿರಿಯರಿಗೆ ನಮಸ್ಕರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪಾಶ್ಚಿಮಾತ್ಯ ಅಭ್ಯಾಸವನ್ನು ತ್ಯಜಿಸುವುದರ ಮೂಲಕ ನಮ್ಮ ಮಣ್ಣಿನ ವಾಸನೆಯ ಜಾಡನ್ನು ಹಿಡಿಯಬೇಕು ಎಂದು ಹೇಳಿದರು.
ಮಾಡೆಲ್ ಶಾಲೆ ಮುಖ್ಯ ಶಿಕ್ಷಕ ಯೋಗೀಶ್ ಮಾತನಾಡಿ, ಹಿಂದಿನ ಪರಂಪರೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ. ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ ಎಂದು ಹೇಳುತ್ತಾ ನಾವೆಲ್ಲಾ ತಪ್ಪಿಲ್ಲದಿದ್ದರೂ ಸಾಮೂಹಿಕವಾಗಿ ಶಿಕ್ಷೆಗೊಳಪಡುತ್ತಿದ್ದೆವು. ಶಿಕ್ಷಕರು ಮಾಡಿದ ತಿದ್ದುಪಡಿಯಿಂದಾಗಿ ನಾವಿಂದು ಸಮಾಜದಲ್ಲಿ ಎತ್ತರದ ಮಟ್ಟಕ್ಕೆ ಬೆಳೆದು ನಿಂತಿz್ದೆÃವೆ. ಮಡಿವಂತಿಕೆ, ಬುದ್ದಿವಂತಿಕೆ, ಸಂಸ್ಕೃತಿ ಇದ್ದ ಸಂಪ್ರದಾಯ ಇಂದು ಬದಲಾಗಿದೆ. ಯಾರೂ ಕೂಡ ಹೆಚ್ಚಿನ ಪರಿಶ್ರಮ ಪಡಲು ತಯಾರಿಲ್ಲ. ಕಷ್ಟಪಟ್ಟರೆ ಫಲವುಂಟು ಎಂಬ ನಾಣ್ನುಡಿಯನ್ನು ನೆನೆಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳು ತಮ್ಮ ಮನೆಯಲಿದ್ದ ಹಳೆಯ ಗೃಹಬಳಕೆ ವಸ್ತುಗಳನ್ನು ತಂದು ವಸ್ತು ಪ್ರದರ್ಶನದಲ್ಲಿ ಇಟ್ಟಿದ್ದರು. ಅದರಲ್ಲಿ ಹಳೆಯ ಬಂದೂಕು, ಕಂಚಿನ ಪಾತ್ರೆಗಳು, ಹಿತ್ತಾಳೆ ಪಾತ್ರೆಗಳು, ಹಳೇ ಟಿವಿ, ರೇಡಿಯೂ, ಟೆಪ್ರೀಕಾರ್ಡ್, ಹಳೇಯ ಕಾಯಿನ್ಸ್, ನೋಟುಗಳು, ಐರನ್ ಬಾಕ್ಸ್, ಚನ್ನಮಣೆ, ಒತ್ತು ಶ್ಯಾವಿಗೆ ಒರಳು, ಮಣ್ಣಿನ ಮಡಕೆಗಳು ಹಳೆಯ ಕತ್ತಿಗಳು, ಕುಂಟೆ-ನೇಗಿಲು, ಗ್ಯಾಸ್ ಸ್ಟೌವ್, ಪಂಪ್ ಸ್ಟೌವ್ ಇತ್ಯಾದಿಗಳು ಪ್ರದರ್ಶನದಲ್ಲಿದ್ದವು. ಲಿಂಗರಾಜು ಮತ್ತು ಮಮತಾ ಅವರು ಎತ್ತಿನ ಗಾಡಿಯನ್ನು ಪ್ರದರ್ಶನಕ್ಕೆ ತಂದು ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶೈಲಜಾ ಯತೀಶ್, ಅಫ್ಸಾನಾಬಾನು, ವಿದ್ಯಾಶ್ರೀ ಮತ್ತಿತರರಿದ್ದರು.