ವಿಜಯವಾಣಿ ಸುದ್ದಿಜಾಲ ಧಾರವಾಡ
ಆಧುನಿಕತೆ ಜೀವನದಲ್ಲಿ ಮನುಷ್ಯ ತನ್ನ ಮನುಷ್ಯತ್ವ ಕಳೆದುಕೊಳ್ಳುತ್ತಿದ್ದು ಮನಸ್ಸು ಮತ್ತಷ್ಟು ಕುಗ್ಗುತ್ತಿದೆ. ಇದರಿಂದ ಹೊರ ಬರಬೇಕಾದರೆ ಅಂತರಂಗದಲ್ಲಿ ಅರಿವಿನ ಜ್ಞಾನ ನೀಡುವ ಪ್ರವಚನಗಳಲ್ಲಿ ಪಾಲ್ಗೊಂಡು ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಎಲ್‌ಇಎ ಮೈದಾನದಲ್ಲಿ ಪ್ರವಚನ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ವಿಶ್ವಧರ್ಮ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯನ ಮನಸ್ಸು ಹಾಗೂ ಶರೀರ ಶುದ್ಧವಾಗಿದ್ದರೆ ದೇಹವೇ ದೇವಾಲಯವಾಗುತ್ತದೆ. ಆತನಲ್ಲಿ ಕ್ರಿಯಾ ಮತ್ತು ಜ್ಞಾನಗಳ ಸಮನ್ವಯವಾದರೆ ನಡೆ ನುಡಿಗಳು ಒಂದಾಗುತ್ತವೆ. ಯುವ ಶಕ್ತಿಯಲ್ಲಿರುವ ಮನಸ್ಸು ಹಾಗೂ ಶರೀರ ಶುದ್ಧೀಕರಣಗೊಂಡರೆ ದೇಶ ಬಲಿಷ್ಠಗೊಳ್ಳಲು ಅನುಕೂಲವಾಗಲಿದೆ. ಜೀವನದ ಪರಮಾನಂದ ಪ್ರಾಪ್ತಿಗೆ ದೇವರ ಧ್ಯಾನ ಬಿಟ್ಟು ವ್ಯರ್ಥ ಜೀವನ ಸಾಗಿಸುವವನಿಗೆ ತೃಪ್ತಿ ಸಿಗಲು ಸಾಧ್ಯವಿಲ್ಲ. ಅಂತರಂಗ ಹಾಗೂ ಬಹಿರಂಗಗಳಲ್ಲಿ ಸತ್ಯಶುದ್ಧ ಆಚರಣೆ ಹೊಂದಿದರೆ ದೇವರೇ ನಮ್ಮನ್ನು ಪ್ರೀತಿಸುತ್ತಾನೆ ಎಂದರು.
ಮುರಘಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತನ ಮನವೇ ಲಿಂಗ. ತನ್ಮನದ ಜ್ಞಾನವೇ ಜಂಗಮ. ಜ್ಞಾನದ ಪರಿಪೂರ್ಣವೇ ಗುರುವಾಗಿದ್ದಾನೆ. ಬಸವಾದಿ ಶರಣರು, ದಾರ್ಶನಿಕರು, ಮಹಾತ್ಮರು ಕಾಡಿಗೆ ಹೋಗಲಿಲ್ಲ. ತಪಸ್ಸು ಮಾಡಲಿಲ್ಲ. ಅವರಲ್ಲಿದ್ದ ಜ್ಞಾನದಿಂದ ಜನರ ಮನಕ್ಕೆ ಮುಟ್ಟಿಸಿ ಜನರನ್ನು ಸಾತ್ವಿಕರನ್ನಾಗಿ ಪರಿವರ್ತಿಸಿ ಸ್ವಾಸ್ಥೃ ಸಮಾಜ ನಿರ್ಮಾಣಕ್ಕೆ ಅಣಿಯಾದರು. ಸಂಸ್ಕಾರ, ಜ್ಞಾನ, ಕರುಣೆ, ದಯೆ, ಇಷ್ಟಲಿಂಗ ಸಾಧನೆ, ಧರ್ಮ, ಸಂಸ್ಕೃತಿಗಳನ್ನು ಪ್ರವಚನ ಮೂಲಕ ಜನರಿಗೆ ತಿಳಿಸುವುದೇ ಮಠಾಧೀಶರ ಕಾಯಕ. 21 ದಿನಗಳ ಕಾಲ ಪ್ರವಚನದಲ್ಲಿ ಸಾವಿರಾರು ಜನರು ಭಾಗವಹಿಸಿ ಅನುಭಾವ ಕೇಳಿದ್ದಾರೆ. ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸತ್ಯ, ಶುದ್ಧ ಅತ್ಯುತ್ತಮ ಪ್ರಜೆಯಾಗುತ್ತಾನೆ ಎಂದರು.
ಸಚ್ಚಿದಾನಂದ ದೇವರು, ಬಸವಪ್ರಭು ದೇವರು, ಭಕ್ತರು ಇತರರು ಇದ್ದರು. ಶಿವಶರಣ ಕಲಬಶೆಟ್ಟರ ಸ್ವಾಗತಿಸಿದರು. ಡಾ. ಶಂಭುಲಿಂಗ ಹೆಗಡಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರುದ್ರಗೌಡ ಪಾಟೀಲ ನಿರೂಪಿದರು. ಹನಮಂತ ಮಾರಡಗಿ ವಂದಿಸಿದರು.