ವಿಜಯಪುರದ ಎಕ್ಸಲಂಟ್​ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಬಿ.ಆರ್​. ಅಂಬೇಡ್ಕರ್​ ಜಯಂತಿ ಅಂಗವಾಗಿ ಅಂಬೇಡ್ಕರ್​ ಹಬ್ಬ ಕಾರ್ಯಕ್ರಮ ಆಚರಿಸಲಾಯಿತು. ಶ್ರೀಕಾಂತ ಕೆ.ಎಸ್​., ಸಚೀನ ಪೂಜಾರ, ರವಿ ಕಲ್ಲೂರಮಠ ಮತ್ತಿತರರಿದ್ದಾರೆ. 
ಜಿಲ್ಲೆ

ಬಾಬಾಸಾಹೇಬ ವಿಚಾರಧಾರೆ ಅಳವಡಿಸಿಕೊಳ್ಳಿ

ಗಿರೀಶ ಸಗರ

ವಿಜಯಪುರ : ವಿದ್ಯಾರ್ಥಿ ಜೀವನದಲ್ಲಿ ಡಾ. ಬಿ.ಆರ್​. ಅಂಬೇಡ್ಕರ್​ ಅವರ ವಿಚಾರಧಾರೆ ಅಳವಡಿಸಿಕೊಂಡರೆ ಸ್ವಾಭಿಮಾನದ ಭವಿಷ್ಯ ನಿರ್ಮಿಸಿಕೊಳ್ಳುವ ಜತೆಗೆ ನಮ್ಮ ಬದುಕಿಗೆ ಹೊಸ ಅರ್ಥ ಬರುತ್ತದೆ ಎಂದು ಎಕ್ಸಲಂಟ್​ ವಿಜ್ಞಾನ ಪ.ಪೂ. ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್​. ಹೇಳಿದರು.

ಭಾರತ ರತ್ನ ಡಾ. ಬಿ.ಆರ್​. ಅಂಬೇಡ್ಕರ್​ ಅವರ 143ನೇ ಜನ್ಮದಿನದ ಅಂಗವಾಗಿ ನಗರದ ಎಕ್ಸಲಂಟ್​ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಅಂಬೇಡ್ಕರ್​ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲಿಯೇ ಅಂಬೇಡ್ಕರ್​ ಅವರ ಬದುಕಿನ ಹೋರಾಟದ ಬಗ್ಗೆ ಅರಿತುಕೊಂಡರೆ ಬದಲಾವಣೆಯ ಪರ್ವಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ ಎಂದರು.

ಶೋಷಣೆಯ ಕೂಪದಲ್ಲಿ ನರಳಿದ ಡಾ.ಬಿ.ಆರ್​.ಅಂಬೇಡ್ಕರ್​ ಅವರು, ತಮ್ಮ ಜ್ಞಾನದ ಬಲದಿಂದ ಇಡೀ ಜಗತ್ತೇ ತಮ್ಮ ಕಡೆಗೆ ತಿರುಗಿ ನೋಡುವಂತೆ ಮಾಡಿದರು. ಅವರ ಜ್ಞಾನದ ಎದುರು ತಲೆದೂಗುವ ಜಗತ್ತು ಅವರನ್ನು ವಿಶ್ವರತ್ನ ಎಂದು ಗೌರವಿಸುತ್ತದೆ. ಅವರಲ್ಲಿದ್ದ ಜ್ಞಾನದ ಹಸಿವು ಹಾಗೂ ಪುಸ್ತಕ ಪ್ರೇಮ ಕಂಡರೆ ಒಬ್ಬ ವ್ಯಕ್ತಿ ಇಷ್ಟೊಂದು ಓದುವುದಕ್ಕೆ ಸಾಧ್ಯವೇ? ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡದೆ ಬಿಡುವುದಿಲ್ಲ ಎಂದು ತಿಳಿಸಿದರು.

ಜೀವಶಾಸ ವಿಭಾಗದ ಹಿರಿಯ ಉಪನ್ಯಾಸಕ ಸಚೀನ ಪೂಜಾರ ಮಾತನಾಡಿ, ನಮ್ಮ ದೇಶಕ್ಕೆ ಬಾಬಾಸಾಹೇಬ್​ ಅಂಬೇಡ್ಕರ್​ ಅವರು ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ವಿದ್ಯಾರ್ಥಿಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದುಕುವ ಮೂಲಕ ಅಂಬೇಡ್ಕರ್​ ಅವರ ಕನಸಿನ ಭಾರತ ನಿರ್ಮಿಸಲು ಶ್ರಮಿಸಬೇಕು ಎಂದು ಹೇಳಿದರು. ಭೌತಶಾಸ ವಿಭಾಗದ ಹಿರಿಯ ಉಪನ್ಯಾಸಕ ರವಿ ಕಲ್ಲೂರಮಠ ನಿರೂಪಿಸಿದರು.