ತೇರದಾಳ: ಬಂಜಾರ ಸಮಾಜದ ಆರಾಧ್ಯ ದೈವ ಸೇವಾಲಾಲರು ಸತ್ಯ, ಅಹಿಂಸೆ ಪ್ರತಿಪಾದಕರಾಗಿ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ ಎಂದು ಪುರಸಭೆ ಸದಸ್ಯ ಕಾಶೀನಾಥ ರಾಠೋಡ ಹೇಳಿದರು.
ಸೇವಾಲಾಲ್ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಲಂಬಾಣಿ ಸಮುದಾಯದವರು ಇತ್ತೀಚೆಗೆ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಲಂಬಾಣಿ ಸಮಾಜಕ್ಕೆ ಸರ್ಕಾರದಿಂದ ಸೂಕ್ತ ಸ್ಥಾನಮಾನ ನೀಡಬೇಕು ಹಾಗೂ ಸಂತ ಸೇವಾಲಾಲರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಬೇಕು ಎಂದರು.
ಸಕಲ ವಾದ್ಯ ಮೇಳಗಳೊಂದಿಗೆ ಕುಂಭ ಆರತಿಯೊಂದಿಗೆ ಭಾವಚಿತ್ರ ಮೆರವಣಿಗೆ ಮಹಾವೀರ ಸರ್ಕಲ್, ಬಸ್ ನಿಲ್ದಾಣ, ಚಾವಡಿ ಸರ್ಕಲ್, ಕನ್ನಡ ಶಾಲೆ, ಕಾಳಿನ ಬಜಾರ್, ಯಲ್ಲಮ್ಮ ದೇವಸ್ಥಾನ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವರಾಜ ನಗರದ ಸಂತ ಸೇವಾಲಾಲರ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.
ಸಮಾಜದ ಮುಖಂಡರಾದ ಮಂಗಲಸಿಂಗ್ ರಾಠೋಡ, ರಾಮಚಂದ್ರ ರಾಠೋಡ, ಸಂತೋಷ ಪವಾರ, ಸುರೇಶ ಪವಾರ, ಆನಂದ ಚವ್ಹಾಣ, ನಿಂಗಪ್ಪ ಲಮಾಣಿ, ರಾಮಜಿ ಚವ್ಹಾಣ, ರಮೇಶ ರಾಠೋಡ, ಕೃಷ್ಣ ರಾಠೋಡ, ಗೋಪಾಲ ರಾಠೋಡ ಮತ್ತಿತರರಿದ್ದರು. ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಲಂಬಾಣಿ ಹಾಡುಗಳಿಗೆ ಹೆಜ್ಜೆ ಹಾಕಿ ಮೆರವಣಿಗೆ ಮೆರುಗು ಹೆಚ್ಚಿಸಿದರು.