ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಬಸಪ್ಪ ಹಣಮಂತ ಹೊಸೂರು ಇವರ ಕ್ಷೇತ್ರದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸುಧಾರಿತ ತೊಗರಿ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿದರು. ಡಾ. ಎಸ್.ಎ. ಇನಾಮದಾರ, ಡಾ. ಎಸ್.ಎಂ. ವಸ್ತ್ರದ, ಜೆ.ಬಿ. ದಶವಂತ ಮತ್ತಿತರರಿದ್ದಾರೆ.  
ಜಿಲ್ಲೆ

ತೊಗರಿ ಬೆಳೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಿ; ಡಾ. ರವೀಂದ್ರ ಬೆಳ್ಳಿ

Vijyapura - Parsuram Bhasagi

ವಿಜಯಪುರ: ತೊಗರಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇಳುವರಿ ಹೆಚ್ಚಿಸಲು ತಾಂತ್ರಿಕತೆ ಅಳವಡಿಸಿಕೊಳ್ಳಬೇಕೆಂದು ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.

ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಬಸಪ್ಪ ಹಣಮಂತ ಹೊಸೂರು ಇವರ ಕ್ಷೇತ್ರದಲ್ಲಿ ಕೃಷಿ ಇಲಾಖೆಯಿಂದ ‘ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ’ಯಡಿ ಗುರುವಾರ ಹಮ್ಮಿಕೊಂಡಿದ್ದ ಸುಧಾರಿತ ತೊಗರಿ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತೊಗರಿ ಬೆಳೆಯನ್ನು ರೈತರು ಹೆಚ್ಚಿನ ಕ್ಷೇತ್ರದಲ್ಲಿ ಬೆಳೆದಿರುತ್ತಾರೆ. ಇಳುವರಿ ಹೆಚ್ಚಳಕ್ಕೆ ಸುಧಾರಿತ ತಳಿಗಳ ಬಳಕೆ, ಅಗಲು ಸಾಲಿನಲ್ಲಿ ನಾಟಿ ಪದ್ಧತಿ, ಸಮಗ್ರ ಪೋಷಕಾಂಶಗಳ ಬಳಕೆ, ಕುಡಿ ಚಿವುಟುವಿಕೆ, ಹೂ ಮತ್ತು ಕಾಯಿಗಳ ಸಂಖ್ಯೆ ಹೆಚ್ಚಿಸಲು ಪಲ್ಸ್ ಮ್ಯಾಜಿಕ್ ಬಳಕೆ ಇತ್ಯಾದಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಲ್ಲಿ ತೊಗರಿಯಲ್ಲಿ ಇಳುವರಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎಸ್.ಎಂ. ವಸ್ತ್ರದ ಮಾತನಾಡಿ, ತೊಗರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೀಜೋಪಚಾರ, ಸಮಗ್ರ ಕೀಟ-ರೋಗಗಳ ಹತೋಟಿ ಮಾಡಿದಲ್ಲಿ ಶೇಕಡವಾರು ಇಳುವರಿಯಲ್ಲಿ ಹೆಚ್ಚಳವಾಗುತ್ತದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಡಾ. ಎಸ್.ಎ. ಇನಾಮದಾರ ಮಾತನಾಡಿ, ಈ ಸಲ ವಿಜಯಪುರ ತಾಲೂಕಿನ ರೈತರಿಗೆ ಸುಧಾರಿತ ತಳಿ ತೊಗರಿ ಸಸಿ ತಯಾರಿಸಿ ನಾಟಿ ಮಾಡಿಸಲಾಗಿದೆ. ಸಹಾಯಧನದಲ್ಲಿ ವಿವಿಧ ಪರಿಕರಗಳನ್ನು ವಿತರಿಸಲಾಗಿದೆ. ಬೆಳೆ ಸಮೀಕ್ಷೆ, ಬೆಳೆ ವಿಮೆ ಮಾಡಿಸಲಾಗಿದೆ. ಹೀಗಾಗಿ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲಾಗಿದೆ ಎಂದರು.

ಕೃಷಿ ಅಧಿಕಾರಿ ಜೆ.ಬಿ. ದಶವಂತ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮುರುಗಯ್ಯ ಶಿವಯ್ಯ ಮಠಪತಿ ಸಾನಿಧ್ಯ ವಹಿಸಿದ್ದರು. ಮಲ್ಲಪ್ಪ ಗಾಣಿಗೇರ, ಸುಭಾಸ ಯಂಭತ್ನಾಳ, ರವಿ ನಾಟೀಕಾರ, ಸೋಮಶೇಖರ ದನಶೆಟ್ಟಿ, ಸಂತೋಷ ಹೊಸೂರು, ಸಂತೋಷ ರಾಠೋಡ, ಮುದಕಣ್ಣ ಯಾಳವಾರ, ಶಿವಾನಂದ ರಾಠೋಡ, ರಾಮು ರಾಠೋಡ ಮತ್ತಿತರರಿದ್ದರು.