ಜಿಲ್ಲೆ

ಸೇವಾ ಮನೋಭಾವ ರೂಢಿಸಿಕೊಳ್ಳಿ

ಕರ್ನಾಟಕ ಜಾನಪದ ಪರಿಷತ್ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಸಲಹೆ

 ಚನ್ನಪಟ್ಟಣ: ಶಿಕ್ಷಣದ ಜತೆಜತೆಗೆೆ ದೇಶದ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ಪರಂಪರೆ, ಮಾನವೀಯ ಮೌಲ್ಯ ಮತ್ತು ಸೇವಾ ಮನೋಭಾವವನ್ನು ಕಲಿಸುವ ಅಗತ್ಯತೆ ಇದೆ ಎಂದು ಕರ್ನಾಟಕ ಜಾನಪದ ಪರಿಷತ್ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ತಿಳಿಸಿದರು.

ನಗರದ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ಹಮ್ ಫೌಂಡೇಷನ್ ಭಾರತ್ ಚನ್ನಪಟ್ಟಣ ವ್ಯಾಸ ಶಾಖೆ ಇತ್ತೀಚೆಗೆ ಆಯೋಜಿಸಿದ್ದ ಪರಿವಾರ ಮಿಲನ, ಸಾಧಕರಿಗೆ ಸನ್ಮಾನ ಹಾಗೂ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಬದುಕಿಗೆ ಮಹತ್ತರವಾದದ್ದು. ಶಿಕ್ಷಣದ ಜತೆಗೆ ಉತ್ತಮ ಗುಣಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.

ಹಮ್ ಫೌಂಡೇಷನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಎಂ.ಮಳಗಿ ಮಾತನಾಡಿ, ಹಮ್ ಫೌಂಡೇಷನ್ ಭಾರತ್ ಸಂಸ್ಥೆಯು ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸ್ವಾಮಿ ವಿವೇಕಾನಂದರ ವಿಚಾಧಾರೆಯ ಪ್ರೇರಣೆಯಿಂದ ಸ್ಥಾಪನೆಗೊಂಡಿದೆ. ಪ್ರಸ್ತುತ ದೇಶಾದ್ಯಂತ 600ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ವಿಶೇಷವಾಗಿ 200ಕ್ಕೂ ಹೆಚ್ಚು ಸಂಪೂರ್ಣ ಮಹಿಳಾ ಶಾಖೆಗಳಿರುವುದು ವಿಶೇಷ. ಯುವ ಸಮೂಹದಲ್ಲಿ ನಮ್ಮ ಸಂಸ್ಕೃತಿ, ದೇಶಭಕ್ತಿ, ಸೇವಾ ಮನೋಭಾವ, ಮಾನವೀಯ ಗುಣಗಳನ್ನು ಭಿತ್ತಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಶ್ರಮಿಸಲಾಗುತ್ತಿದೆ ಎಂದರು.

ಸಂಸ್ಥೆಯ ರಾಷ್ಟ್ರೀಯ ಮಹಿಳಾ ಸಂಯೋಜಕಿ ಡಾ. ಸುನೀತ್ ಪುರೋಹಿತ್ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ಇಂತಹ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸೇವೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದು ಪುಣ್ಯದ ಕೆಲಸ ಎಂದರು.

ಡಯಟ್ ಉಪ ನಿರ್ದೇಶಕ ಶಿವಪ್ಪ ಹಾಗೂ ವ್ಯಾಸ ಶಾಖೆಯ ಅಧ್ಯಕ್ಷ ಬಿ.ಎನ್.ಕಾಡಯ್ಯ ಮಾತನಾಡಿದರು. ಪ್ರಾಚೀನ ಪರಂಪರೆ ಯೋಗ ಸಂಸ್ಥೆಯ ಮುಖ್ಯಸ್ಥ ಡಾ.ಪ್ರಜ್ವಲ್ ಜಿ.ಗೌಡ, ಸ್ವಾವಲಂಬಿ ವಿಕಲಚೇತನ ಜ್ಯೋತಿರಾವ್, ರಾಜ್ಯ ಸ್ವಯಂ ಸೇವಾ ಸಂಸ್ಥೆಯ ಉಪಾಧ್ಯಕ್ಷೆ ಡಾ.ಎ.ಎಸ್.ಪ್ರೇಮಾ, ಸಮಾಜ ಸೇವಕ ಬಿ.ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.