ಬಾಗಲಕೋಟೆಯಲ್ಲಿ ಇತ್ತೀಚೆಗೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ‘ವಿಜ್ಞಾನಿಗಳ ನಡೆ ರೈತರ ಕಡೆ’ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಡಾ. ಸಿದ್ದಪ್ಪ ಅಂಗಡಿ ಮಾತನಾಡಿದರು. 
ಜಿಲ್ಲೆ

ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ಲಾಭದಾಯಕ ಕೃಷಿಗಾಗಿ ಹಾಗೂ ಅಂತರ ಬೆಳೆ ವಾಣಿಜ್ಯ ಬೆಳೆಗಳ ಸಂಪೂರ್ಣ ಮಾಹಿತಿಯನ್ನು ಉಚಿತವಾಗಿ ಪಡೆದುಕೊಂಡು ಆಧುನಿಕ ಕೃಷಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ರೈತರಿಗೆ ಕೃಷಿ ವಿಜ್ಞಾನಿ ಡಾ. ಸಿದ್ದಪ್ಪ ಅಂಗಡಿ ಸಲಹೆ ನೀಡಿದರು.

ತಾಲೂಕಿನ ಬೇವಿನಮಟ್ಟಿ, ಕಿರಸೂರ, ನೀರಲಕೇರಿ ರೈತರು, ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ, ತೋಟಗಾರಿಕಾ ವಿಶ್ವವಿದ್ಯಾಲಯ ಹಾಗೂ ಕೃಷಿ ತೋಟಗಾರಿಕಾ ಮತ್ತು ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಇತ್ತೀಚೆಗೆ ಜರುಗಿದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ‘ವಿಜ್ಞಾನಿಗಳ ನಡೆ ರೈತರ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಮಣ್ಣು ಮಾದರಿ ತೆಗೆಯುವ ವಿಧಾನವನ್ನು ಪ್ರಾತ್ಯಕ್ಷಿಕವಾಗಿ ವಿವರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಭವ್ಯ ಮಾತನಾಡಿ, ಪೂರ್ವ ಮುಂಗಾರು ಬೆಳೆಗಳಾದ ತೊಗರಿ, ಹೆಸರು ಮೆಣಸಿನಕಾಯಿ, ಈರುಳ್ಳಿ ಬೆಳೆಗಳ ಹೊಸ ತಳಿಗಳ ಮಾಹಿತಿಗಳನ್ನು ವಿವರಿಸಿದರು.

ಹವಾಮಾನ ತಜ್ಞ ಬಸವರಾಜ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣ ಮತ್ತು ಮುಂದಿನ 15 ದಿನಗಳಲ್ಲಿಯ ಹವಾಮಾನ ಮಾಹಿತಿಯನ್ನು ರೈತರಿಗೆ ತಿಳಿಸಿದರು.

ಕೃಷಿ ಇಲಾಖೆಯ ಸ್ನೇಹಾ ಕರಣಿ ಮಾತನಾಡಿ, ಸರ್ಕಾರ ಕೃಷಿ ಅಭಿವೃದ್ಧಿಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರಗಳ ಹಾಗೂ ಔಷಧಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ಈ ಯೋಜನೆ ಸೌಲತ್ತನ್ನು ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಆಹಾರ ಭದ್ರತೆ ಯೋಜನೆ ಅಡಿಯಲ್ಲಿ ಸಿಗುವ ಪೂರ್ವ ತಳಿಗಳ ಬೀಜಗಳ ವಿವರಗಳನ್ನು ರೈತರಿಗೆ ತಿಳಿಸಿದರು.

ಮುಂಗಾರು ಬೆಳೆಗಳನ್ನು ಹಾಗೂ ಪರ್ಯಾಯ ಬೆಳೆಗಳ ಮಾದರಿಗಳನ್ನು ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿದ ವಿಜ್ಞಾನಿಗಳು ರೈತರಲ್ಲಿರುವ ಅನೇಕ ಗೊಂದಲಗಳನ್ನು ನಿವಾರಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಷಣ್ಮುಖ ಅಂಗಡಿ, ಹನಮಂತ ಮಳಗಾವಿ, ರಂಗಪ್ಪ ಇಂಗಳಗಿ, ರಂಗಪ್ಪ ಪೂಜಾರಿ, ತಿಪ್ಪಣ ಮಜ್ಜಗಿ, ವಿಠ್ಠಲ ವಾಲಿಕಾರ, ಗದಿಗೆಪ್ಪ ಕರಡಿ, ಇತರರು ಇದ್ದರು.