ಗಂಗಾವತಿ: ರೈತರು ಸುಧಾರಿತ ಭತ್ತದ ಬೇಸಾಯ ಕ್ರಮ ಅಳವಡಿಸಿಕೊಳ್ಳಬೇಕು. ಸವಳು ಭೂಮಿಗಾಗಿ ಅವಿಷ್ಕಾರಗೊಂಡ ಭತ್ತದ ತಳಿ ಆಯ್ಕೆ ಮಾಡಿಕೊಳ್ಳುವಂತೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಹೇಳಿದರು.
ಇದನ್ನೂ ಓದಿ:ಕೊಡಗಿನಲ್ಲಿ ಭತ್ತದ ಪ್ರದೇಶ ಗಣನೀಯ ಇಳಿಕೆ
ತಾಲೂಕಿನ ಮಲ್ಲಾಪುರದ ಭತ್ತದ ಗದ್ದೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸವಳು ಸಹಿಷ್ಣು ಭತ್ತದ ತಳಿ ಜಿಎನ್‌ವಿ 1109 ಕುರಿತು ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ಸವಳು ಮಣ್ಣಿಗೆ ಸೂಕ್ತವಾದ ಭತ್ತದ ತಳಿಯನ್ನು ಕಷಿ ಸಂಶೋಧನಾ ಕೇಂದ್ರ ಅವಿಷ್ಕಾರಗೊಳಿಸಿದ್ದು, ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಬಹುದು. ರಾಯಚೂರು ಕೃಷಿ ವಿವಿಯಿಂದ ಬಿಡುಗಡೆ ಮಾಡುವ ಹೊಸ ತಳಿ ಮತ್ತು ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತಿಳಿಸಲಾಗುತ್ತಿದೆ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ.ಜೆ.ಎಂ.ನಿಡಗುಂದಿ ಮಾತನಾಡಿ, ಅತಿಯಾದ ನೀರು ಮತ್ತು ರಸಗೊಬ್ಬರದ ಬಳಕೆಯಿಂದ ಭೂಮಿ ಸವಳಾಗಿದ್ದು, ಉತ್ಪಾದನೆ ಕಡಿಮೆಯಾಗಿದೆ. ಭತ್ತದ ಹೊಸ ತಳಿ ಬೆಳೆಯುವುದರಿಂದ ಉತ್ತಮ ಲಾಭಾಂಶ ಪಡೆಯಬಹುದು ಎಂದು ತಿಳಿಸಿದರು. ತಳಿ ಕುರಿತು ಕೃಷಿ ಸಂಶೋಧನಾ ಕೇಂದ್ರ ತಳಿ ತಜ್ಞ ಡಾ.ಮಹಾಂತಶಿವಯೋಗಯ್ಯ ಮಾತನಾಡಿದರು. ರೋಗ ನಿರ್ವಹಣೆ ಕುರಿತು ಸಸ್ಯರೋಗ ತಜ್ಞೆ ಆರ್.ಎಂ.ರೇವತಿ, ಮಣ್ಣು ಪರೀಕ್ಷೆ ಮತ್ತು ಸವಳು ಮಣ್ಣಿನ ನಿರ್ವಹಣೆ ಕುರಿತು ತಾಂತ್ರಿಕ ಅಧಿಕಾರಿ ಎನ್.ಶ್ರುತಿ, ಹೊಸ ತಳಿಗಳ ಬೀಜೋತ್ಪಾದನೆ ಕುರಿತು ತಜ್ಞೆ ಡಾ.ಜೆ.ರಾಧಾ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಛತ್ರಪ್ಪ ನಾಯಕ, ಸದಸ್ಯ ಮಲಿಯಪ್ಪ ಕಟ್ಟಿಮನಿ, ರೈತರಾದ ಪಂಪಾಪತಿ ಕಟ್ಟಿಮನಿ, ಕೆ.ರಾಮಕಷ್ಣ, ಸಿದ್ಧಲಿಂಗಯ್ಯ, ಬೆಳೆ ಸಮೀಕ್ಷೆಗಾರ ಹನುಮಂತಪ್ಪ ಇತರರಿದ್ದರು.