ವಿರಾಜಪೇಟೆ: ವಿರಾಜಪೇಟೆಯ ಮಗ್ಗುಲ ಗ್ರಾಮದಲ್ಲಿರುವ ರೋಲಿಕ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಆಹಾರಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಚಾಲಕ ಚೆಟಬಂಡ ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಸರಸ್ವತಿ ಆಹಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಹಾರ ಪದ್ಧತಿಯಲ್ಲಿ ಮೂರು ಗುಣಗಳಿವೆ. ಅವುಗಳೆಂದರೆ ಸತ್ವ ಅಂದರೆ ಶುದ್ಧತೆ, ರಜಸ್ ಅಂದರೆ ಉತ್ಸಾಹ, ತಮಸ್ ಎಂದರೆ ಜಡತ್ವ. ನಾವು ಸೇವಿಸುವ ಆಹಾರವು ಮೂರು ಮೂಲಭೂತ ಗುಣಗಳಿಗೆ ಸಂಬಂಧಿಸಿದೆ. ಆದ್ದರಿಂದ ಒಳ್ಳೆಯ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಪಕ್ಷಿ ತಜ್ಞ ಡಾ.ನರಸಿಂಹನ್ ಮಾತನಾಡಿ, ಮಕ್ಕಳಲ್ಲಿ ಆಹಾರ ಕ್ರಮದ ಬಗ್ಗೆ ಯಾವುದನ್ನು ಸೇವಿಸಬೇಕು, ಯಾವ ರೀತಿ ಆಹಾರ ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಸಿಹಿ ತಿಂಡಿಗಳಲ್ಲಿ ರಾಸಾಯನಿಕಗಳನ್ನು ಬೆರೆಸಿ ಹೆಚ್ಚು ಆಕರ್ಷಿತರಾಗುವಂತೆ ಮಾಡುತ್ತಾರೆ. ಹೊರಗಿನಿಂದ ತರುವಂತಹ ಸಿಹಿ ತಿಂಡಿಗಳನ್ನು ಮಕ್ಕಳಿಗೆ ಕೊಟ್ಟು ಅಭ್ಯಾಸ ಮಾಡಿಸದೆ ಆರೋಗ್ಯಕರ ಆಹಾರವನ್ನು ನೀಡಬೇಕು ಎಂದು ಸಲಹೆ ನೀಡಿದರು.
10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ತಮ್ಮ ಅನುಭವ ಹಂಚಿಕೊಂಡರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರಾಂಶುಪಾಲರಾದ ಗ್ರೇಸಿ, ಮುಖ್ಯ ಶಿಕ್ಷಕಿ ಎನ್.ಯು.ತೇಜ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎ.ಎಚ್.ರಮ್ಯಾ, ಶಿಕ್ಷಕಿಯರು, ಪಾಲಕರು ಉಪಸ್ಥಿತರಿದ್ದರು.