ಜಿಲ್ಲೆ

ಅಂಬೇಡ್ಕರ್ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ: ಜಯಪ್ಪ ಹಾನಗಲ್

ಆದರ್ಶ್. ಎಂ.ಕೆ.

ಮಡಿಕೇರಿ: ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಇತಿಹಾಸವನ್ನು ಸೃಷ್ಟಿಸಬೇಕಾದರೆ ಡಾ.ಬಿ.ಆರ್ ಅಂಬೇಡ್ಕರ್‌ರವರ ಚಿಂತನೆ ಮತ್ತು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ದಲಿತ ಚಳುವಳಿಯ ಹೋರಾಟಗಾರ ಜಯಪ್ಪ ಹಾನಗಲ್ ಅಭಿಪ್ರಾಯ ವ್ಯಕ್ತಪಡಿಸಿದರು.


ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ೫೦ನೇ ಸುವರ್ಣ ಸಂಭ್ರಮೋತ್ಸವ ಹಾಗೂ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


ಜಾತಿ ಪ್ರತಿಷ್ಠೆಗಳಿಲ್ಲದ ಅಸ್ಪೃಶ್ಯತೆಯ ತೊಡಕುಗಳಿಲ್ಲದ ಸಮತ ಭಾವದ ದೇಶವನ್ನು ಕಟ್ಟಬೇಕು. ಕೆಳವರ್ಗದವರಲ್ಲಿ ಮಾನವೀಯ ಘನತೆಯ ಸ್ವಾಭಿಮಾನವನ್ನು ಚಿಗುರಿಸುವುದು ಅಂಬೇಡ್ಕರ್‌ರವರ ಬದುಕಿನ ಧ್ಯೆಯವಾಗಿತ್ತು. ದಲಿತ ಜನಾಂಗದ ಬದುಕಿನ ಇತಿಹಾಸದಲ್ಲಿ ಅಸ್ಪಶ್ಯತೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಅದನ್ನು ಕೊನೆಗೊಳಿಸಬೇಕು ಎಂಬ ಹೋರಾಟಕ್ಕೆ ಇಳಿದ ಮೊಟ್ಟ ಮೊದಲ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಅಸಮಾನತೆ ಮೇಲು ಕೀಳು ಮಾನವ ನಿರ್ಮಿತವಲ್ಲ. ಅದರಿಂದ ದಲಿತರಿಗೆ ಶಿಕ್ಷಣ ಕೊಡುವುದರ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಬೇಕು. ಅವರನ್ನು ಸಬಲರನ್ನಾಗಿ ಮಾಡಿದರೆ ಅವರು ಹಿಂದುಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.


ವಕೀಲರು ಹಾಗೂ ಚಿಂತಕ ಕಾಳಿಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೊಂದು ಸುಭದ್ರ ಸಂವಿಧಾನ ನೀಡಿದ್ದು, ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವುದು ಅವರ ಕೊಡುಗೆಯಾಗಿದೆ. ಸಮಾಜಕ್ಕೆ ವಿದ್ಯಾವಂತರಾಗಿರಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ ಎಂಬ ಸಲಹೆಗಳ ಮೂಲಕ ಜೀವನ ದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು ಎಂಬ ಅನೇಕ ವಿಚಾರಗಳನ್ನು ದೇಶಕ್ಕಾಗಿ ನೀಡಿದರು. ಮಹಿಳಾ ಹಕ್ಕುಗಳನ್ನು ನೀಡಿದ ಮಹಾನ್ ವಿದ್ವಾಂಸರು ಎಂದು ಬಣ್ಣಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ, ಡಾ.ಬಿ.ಆರ್ ಅಂಬೇಡ್ಕರ್. ಅವರ ಪುಸ್ತಕಗಳ ಅಧ್ಯಯನದ ಮೂಲಕ ಅಂಬೇಡ್ಕರ್‌ರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.


ಇದೇ ಸಂದರ್ಭ ದಲಿತ ಚಳುವಳಿಯ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕ ಜಯಪ್ಪ ಹಾನಗಲ್ ಹಾಗೂ ವಕೀಲರು ಹಾಗೂ ಚಿಂತಕ ಕಾಳಿಸ್ವಾಮಿ ಅವರನ್ನು ಜಿಲ್ಲಾ ಸಮಿತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಸಮಿತಿ ಪುನರ್ ರಚನೆ ಮಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರುಗಳಾಗಿ ಬಸವಣ್ಣ ವಚನಕಾರರಾದ ಕರಿಯಯ್ಯ ಬ್ಯಾಡಗೊಟ್ಟ, ಬಾವಾ ಮಾಲ್ದಾರೆ, ಎಂ.ಚಿರಂಜೀವಿ ಕುಶಾಲನಗರ, ಬೋಜ ವಿರಾಜಪೇಟೆ, ಅಯ್ಯಪ್ಪ ಪೊನ್ನಂಪೇಟೆ, ಮನೋಜ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯರಾಗಿ ಕುಳಿಯ ವಿರಾಜಪೇಟೆ, ಮಡಿಕೇರಿ ತಾಲೂಕು ಸಮಿತಿ ಸಂಚಾಲಕಿ ಗೌರಮ್ಮ ಅವರನ್ನು ನೇಮಕ ಮಾಡಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಬಾವಾ ಮಾಲ್ದಾರೆ, ಜಿಲ್ಲಾ ಖಜಾಂಚಿ ರಾಮಚಂದ್ರ ಇತರರಿದ್ದರು.