ಜಿಲ್ಲೆ

ಆಡೂರಿನ 21 ಜನ ಕ್ವಾರಂಟೈನ್

Haveri

ಹಾವೇರಿ: ವಿಜಯಪುರ ಜಿಲ್ಲೆಯ ವ್ಯಕ್ತಿಗಳಿಬ್ಬರು ಕರೊನಾ ಸೋಂಕು ದೃಢ ಪಡುವ ಕೆಲವು ದಿನ ಹಿಂದೆ ಹಾನಗಲ್ಲ ತಾಲೂಕಿನ ಆಡೂರಿಗೆ ಬಂದು ಹೋಗಿದ್ದು, ಅವರನ್ನು ಭೇಟಿಯಾದ 21 ಜನರನ್ನು ತಪಾಸಣೆಗಾಗಿ ಭಾನುವಾರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ.

ವಿಜಯಪುರ ಜಿಲ್ಲೆಯ ವ್ಯಕ್ತಿಗಳಿಬ್ಬರು ಕ್ಯಾನ್ಸ್​ರ್ ಚಿಕಿತ್ಸೆಗಾಗಿ ಮೆಡಿಕಲ್ ಪಾಸ್ ಪಡೆದು ಬೆಂಗಳೂರಿಗೆ ಹೋಗಿದ್ದರು. ಅಲ್ಲಿ ಚಿಕಿತ್ಸೆ ಪಡೆದು ಏ. 5ರಂದು ಬೆಂಗಳೂರಿನಿಂದ ಕಾರಿನಲ್ಲಿ ವಿಜಯಪುರಕ್ಕೆ ತೆರಳುವಾಗ ಮಾರ್ಗ ಮಧ್ಯೆ ಹಾನಗಲ್ಲ ತಾಲೂಕು ಆಡೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ಊಟ ಮಾಡಿ ತೆರಳಿದ್ದರು. ಇಲ್ಲಿಂದ ತೆರಳಿದ ಕೆಲ ದಿನ ನಂತರ ಅವರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ.

ಈ ಮಾಹಿತಿಯನ್ನು ಸೋಂಕಿತರು ಖಚಿತಪಡಿಸಿದ್ದು, ಅವರ ಹೇಳಿಕೆ ಆಧಾರದಲ್ಲಿ ಭಾನುವಾರ ಆಡೂರ ಗ್ರಾಮಕ್ಕೆ ತೆರಳಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ಅವರನ್ನು ಭೇಟಿಯಾದ ಒಟ್ಟು 21 ಜನರನ್ನು ತಪಾಸಣೆಗಾಗಿ ಕರೆತಂದಿದ್ದಾರೆ. ಅಲ್ಲದೆ, ಆಡೂರಿನಲ್ಲಿ ರೋಗಿಗಳು ಊಟ ಮಾಡಿದ ಹೋದ ಮನೆಗಳ ಸುತ್ತ ಬಂದೋಬಸ್ತ್ ಮಾಡಲಾಗಿದೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ‘ವಿಜಯಪುರದ ಸೋಂಕಿತರು ನೀಡಿದ ಮಾಹಿತಿಯನ್ವಯ ಮುಂಜಾಗ್ರತಾ ಕ್ರಮವಾಗಿ ಅವರ ಸಂಪರ್ಕಕ್ಕೆ ಬಂದ 21 ಜನರನ್ನು ತಪಾಸಣೆಗೆ ಕರೆತರಲಾಗಿದೆ. ಯಾರಲ್ಲಿಯೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರ ಗಂಟಲ ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗುವುದು. ಸದ್ಯ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ’ ಎಂದರು.