ಜಿಲ್ಲೆ

ಕನ್ನಡದ ದೀಪ ಬೆಳಗಲು ಅಭಿಮಾನ, ಭಕ್ತಿ ಬೇಕು

ಹೊನ್ನಾವರ: ‘ಕನ್ನಡ ಭಾಷೆಗೆ ದೊಡ್ಡ ಪರಂಪರೆಯಿದೆ. ಕನ್ನಡದ ದೀಪ ಬೆಳಗಲು ಇಂದು ಕೇವಲ ಅಭಿಮಾನವಲ್ಲ, ಭಕ್ತಿಯ ಅಗತ್ಯವಿದೆ’ ಎಂದು ಕವಿ ಶಿವರಾಮ ನಾಯಕ ಹೇಳಿದರು.

ತಾಲೂಕಿನ ಅಳ್ಳಂಕಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಾವಿರ ವರ್ಷ ಮಾತ್ರ ಇತಿಹಾಸವಿರುವ ಇಂಗ್ಲಿಷ್ ಇಂದು ಜಾಗತಿಕ ಭಾಷೆಯಾಗಿ ಬೆಳೆದಿದೆ. ಹಲವು ಸಾವಿರ ವರ್ಷಗಳ ಹಿಂದೆಯೇ ಬದುಕು ರೂಪಿಸಿಕೊಂಡು ಪರಂಪರೆ ನಿರ್ವಿುಸಿರುವ ಕನ್ನಡವನ್ನೂ ನಾವು ಮನಸು ಮಾಡಿದಲ್ಲಿ ಜಾಗತಿಕವಾಗಿ ಬೆಳೆಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ.ಎಸ್. ಹೆಗಡೆ ಮಾತನಾಡಿ, ಸಾಹಿತ್ಯ, ಸಂಗೀತ, ಕಲೆ ಹಾಗೂ ದಾರ್ಶನಿಕತೆಯಲ್ಲಿ ಜ್ಞಾನದ ನೆಲೆಯಾಗಿದ್ದ ಕರ್ನಾಟಕ ಇಂದು ವಿಜ್ಞಾನ ತಂತ್ರಜ್ಞಾನದ ನೆಲೆಯಾಗಿ ದೇಶದ ಗಮನ ಸೆಳೆದಿದೆ. ಇದನ್ನು ಮುನ್ನಡೆಸುವ ಹೊಣೆ ಯುವ ಜನತೆಯ ಮೇಲಿದೆ ಎಂದರು.

ಈ ಕಾಲೇಜಿನಲ್ಲಿ ಕಲಿತು ಈಗ ಬಿಎಡ್ ಹಾಗೂ ಎಂಎಡ್​ನಲ್ಲಿ ಬಂಗಾರದ ಪದಕಗಳನ್ನು ಪಡೆದು ಸಾಧನೆಗೈದ ಉಪನ್ಯಾಸಕಿ ಗುಲ್ನಾರ್ ಬಶೀರ ಸಾಬ್ ಹಾಗೂ ಬಡತನದಲ್ಲೇ ಬಿಎಡ್ ಕಲಿತು, ಶಿಕ್ಷಕಿಯಾಗಿರುವ ಭವಾನಿ ಗೌಡ ಅವರನ್ನು ಸನ್ಮಾನಿಸಲಾಯಿತು. ಸತೀಶ ನಾಯ್ಕ, ವಿದ್ಯಾರ್ಥಿಗಳಾದ ಕಾವ್ಯಾ ನಾಯ್ಕ, ಹೇಮಾವತಿ ನಾಯ್ಕ, ಗಣೇಶ ಹೆಗಡೆ ಮಾತನಾಡಿದರು. ಶೇಖರ ನಾಯ್ಕ, ಕಿಶೋರ ನಾಯ್ಕ ಹಾಗೂ ಮಹೇಶ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.