ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ 
ಜಿಲ್ಲೆ

ಚುರುಕುಗೊಳ್ಳಬೇಕಿದೆ ಆಡಳಿತ ಯಂತ್ರ

ಎನ್.ವೆಂಕಟೇಶ್

ಅಭಿವೃದ್ಧಿಗೆ ಅಡ್ಡಿಯಾಗಿದ್ದ ನೀತಿಸಂಹಿತೆ ತೆರವು- ಜನಪ್ರತಿನಿಧಿಗಳು ಚಳಿ ಬಿಟ್ಟು ಕೆಲಸ ಮಾಡಲಿ


ಚಿಕ್ಕಬಳ್ಳಾಪುರ: ಫಲಿತಾಂಶಗಳ ಘೋಷಣೆಗಳೊಂದಿಗೆ ಚುನಾವಣೆ ನೀತಿಸಂಹಿತೆ ಮುಗಿದಿದೆ. ಈಗ ಆಡಳಿತ ಯಂತ್ರಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಮತ್ತಷ್ಟು ಚುರುಕು ಮುಟ್ಟಿಸಿ, ಜನಪರ ಕೆಲಸಗಳಿಗೆ ವೇಗ ನೀಡಬೇಕಿದೆ.
ಹೌದು! ಲೋಕಸಭಾ, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಸಚಿವರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳಿಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕಡೆಗೆ ಗಮನ ಕೊಡಲಾಗಲಿಲ್ಲ. ಇದಕ್ಕೆ ನೀತಿಸಂಹಿತೆ ಅಡ್ಡಿಯಾಗಿತ್ತು. ಈಗ ಅದು ಕೂಡ ತೆರವುಗೊಂಡಿದೆ. ಇದರಿಂದ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕೆಲಸಗಳು, ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ, ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.


ಸುದೀರ್ಘ ನೀತಿಸಂಹಿತೆ
ಮಾ.16ರಂದು ಲೋಕಸಭಾ ಚುನಾವಣೆಗೆ ನೀತಿಸಂಹಿತೆ ಜಾರಿಗೆ ಬಂದಿತ್ತು. ಮಾ.28ರಂದು ಅಧಿಸೂಚನೆ ಹೊರಡಿಸಿದ್ದು ಏ.26ರಂದು ಮತದಾನ ಪ್ರಕ್ರಿಯೆ ನಡೆಯಿತು. ಇದಾದ ಬಳಿಕ ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಮುಂದುವರಿಸಲಾಯಿತು. ಇದರ ನಡುವೆ ಜೂ.4ರಂದು ಲೋಕಸಭಾ ಚುನಾವಣಾ ಫಲಿತಾಂಶ ಮತ್ತು ಜೂ.6ರಂದು ವಿಧಾನ ಪರಿಷತ್ ಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದೆ. ಇದರೊಂದಿಗೆ ಚುನಾವಣಾ ಜ್ವರ ದೂರವಾಗಿದೆ.

ಚುನಾವಣಾ ಹೆಚ್ಚಿನ ಒತ್ತಡ
ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಮಾ.16ರಿಂದಲೂ ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಯಾವುದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಾಧ್ಯವಾಗಿಲ್ಲ. ಬಹುತೇಕ ಅಧಿಕಾರಿಗಳು ನಿಯಮ ಪಾಲನೆ ಮೇಲೆ ನಿಗಾ, ಮತದಾರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳ ಸಜ್ಜು, ಫಲಿತಾಂಶ ಘೋಷಣೆ ಸೇರಿ ಚುನಾವಣಾ ಜವಾಬ್ದಾರಿಗಳ ನಿರ್ವಹಣೆ ಕಡೆಗೆ ಗಮನಹರಿಸಿದ್ದರು. ಇದರ ಒತ್ತಡದಲ್ಲಿ ಮೂರ್ನಾಲ್ಕು ತಿಂಗಳಿಂದಲೂ ತುರ್ತು ಸಮಸ್ಯೆ ಹೊರತುಪಡಿಸಿದಂತೆ ಅಭಿವೃದ್ಧಿ ಕೆಲಸ ಮುಂದೂಡಿಕೊಂಡು ಬರಲಾಗಿದೆ.

ಕಾಡುತ್ತಿವೆ ನಾನಾ ಸಮಸ್ಯೆ
ಕಳೆದ ಸಾಲಿನ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಮಳೆ ಅಭಾವದಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶದಿಂದ ರೈತರು ನಷ್ಟ ಅನುಭವಿಸಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಲಾಭದ ನಿರೀಕ್ಷೆಯಲ್ಲಿ ರೈತರು ಮುಂಗಾರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ, ಬ್ಯಾಂಕ್ ಸಾಲ ಮತ್ತು ವಿಮೆ ಪರಿಹಾರ ಸೇರಿ ವಿವಿಧ ಸವಲತ್ತುಗಳ ಅಗತ್ಯವಿದೆ. ಮತ್ತೊಂದೆಡೆ ಮುಂಗಾರು ಅವಧಿ ಪ್ರಾರಂಭವಾಗಿದೆ. ಜಲಾವೃತಗೊಂಡ ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಅನೈರ್ಮಲ್ಯದಿಂದ ಸಾಂಕ್ರಾಮಿಕ ಹರಡುತ್ತಿವೆ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ವ್ಯಾಪಕ ದೂರುಗಳೂ ಕೇಳಿ ಬರುತ್ತಿವೆ. ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಾಗಿದೆ.

ಅಭಿವೃದ್ಧಿ ಕೆಲಸಗಳು ಬಾಕಿ
ಸಚಿವರು ಮತ್ತು ಶಾಸಕರು ಆಯ್ಕೆಯಾಗಿ ವರ್ಷ ಕಳೆದರೂ ಕ್ಷೇತ್ರ ವ್ಯಾಪ್ತಿಯಲ್ಲಿ ಘೋಷಣೆಯಾದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣ ಮೇಲ್ದರ್ಜೆಗೇರಿಸುವುದು, ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಚಾಲನೆ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಯೋಜನೆಯ ಕಟ್ಟಡಗಳು, ರಸ್ತೆಗಳು ಮತ್ತು ಚರಂಡಿಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿ ಸೇರಿ ನಾನಾ ಕೆಲಸಗಳು ಪೂರ್ಣಗೊಳ್ಳಬೇಕಾಗಿದೆ.
ಅಭಿವೃದ್ಧಿ ಕೆಲಸಗಳಿಗೆ ನಿರೀಕ್ಷೆಗೆ ತಕ್ಕಂತೆ ಸಕಾಲದಲ್ಲಿ ಸರ್ಕಾರದಿಂದ ಅನುದಾನ ದೊರಕುತ್ತಿಲ್ಲ ಎನ್ನಲಾಗಿದ್ದು, ಕ್ರಿಯಾಯೋಜನೆ ತಯಾರು, ಟೆಂಡರ್ ಆಹ್ವಾನ ಹಂತದಲ್ಲಿಯೇ ಸ್ಥಗಿತಗೊಂಡಿದ್ದು, ಕಾಮಗಾರಿಗಳ ನಿರ್ವಹಣೆ ಪ್ರಾರಂಭದ ಹಂತದ ಅವಧಿಯಲ್ಲಿ ನೀತಿಸಂಹಿತೆ ಘೋಷಣೆಯಾಗಿದೆ. ಇದಕ್ಕೆ ಮತ ಗಳಿಕೆ ದೃಷ್ಟಿಯಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅಭಿವೃದ್ಧಿ ಕೆಲಸ ಕೈಗೊಳ್ಳುವ ಮತ್ತು ಹೆಚ್ಚಿನ ಸವಲತ್ತುಗಳನ್ನು ಒದಗಿಸುವುದಾಗಿ ಪ್ರಚಾರದಲ್ಲಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಈಗ ಈ ಕಾರ್ಯಗಳಿಗೆ ವೇಗ ನೀಡಬೇಕಿದೆ.


ನೀತಿಸಂಹಿತೆ ಜಾರಿ ಅವಧಿಯಲ್ಲಿ ಜನರು ಸರ್ಕಾರಿ ಕಚೇರಿಗೆ ಬಂದಾಗ ಅಧಿಕಾರಿಗಳು ಚುನಾವಣಾ ನೆಪ ಹೇಳಿ ವಾಪಸ್ ಕಳುಹಿಸುತ್ತಿದ್ದರು. ಸ್ಥಳೀಯ ಜನಪ್ರತಿನಿಧಿಗಳಿಗೆ ಆಡಳಿತ ಯಂತ್ರದಲ್ಲಿ ಮೂಗು ತೂರಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಚುನಾವಣಾ ಪ್ರಕ್ರಿಯೆ ಮುಗಿದಿದೆ. ಈಗಲಾದರೂ ಮುಂಗಾರು ಅವಧಿಯಲ್ಲಿ ಕೃಷಿ ಸವಲತ್ತುಗಳು, ಪ್ರಾಕೃತಿಕ ವಿಕೋಪ ಪರಿಹಾರ, ವಿವಿಧ ಇಲಾಖೆಗಳ ಅಭಿವೃದ್ಧಿ ಕೆಲಸಗಳ ನಿರ್ವಹಣೆಯ ನಿಟ್ಟಿನಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.
- ವಿ.ರವಿಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ