ಮೂಡಿಗೆರೆ: ಸಂವಿಧಾನ ಬದಲಾವಣೆಗೆ ಕೇಂದ್ರದ ಬಿಜೆಪಿ ಸರ್ಕಾರ ಸಿದ್ಧವಿಲ್ಲ. ಹಿಂದಿನ ಸಂಸದರೊಬ್ಬರ ವೈಯಕ್ತಿಕ ಅಭಿಪ್ರಾಯವನ್ನು ಕಾಂಗ್ರೆಸ್ ಚುನಾವಣೆಗೊಸ್ಕರ ಬಳಸಿಕೊಂಡು ಬಿಜೆಪಿ ವಿರುದ್ಧ ಕೆಲಸಕ್ಕೆ ಬಾರದ ಅಸ್ತ್ರ ಪ್ರಯೋಗಿಸಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಸಂವಿಧಾನ ಬದಲಾವಣೆ ಮಾಡುವುದು ಸಾಧ್ಯವಿಲ್ಲ. ಕೆಲವೊಂದು ತಿದ್ದುಪಡಿ ನಡೆಸಲು ಸಂವಿಧಾನದಲ್ಲಿ ಅವಕಾಶವಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ 106 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದಾರೆ. ಆಡಳಿತಾತ್ಮಕ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಒಂದೆರಡು ತಿದ್ದುಪಡಿ ಮಾಡಬಹುದಷ್ಟೇ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಸ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮದ ಪ್ರಕಾರ ರಾಜ್ಯಕ್ಕೆ ಬರ ಹಾಗೂ ಅತಿವೃಷ್ಟಿಗೆ ಇಂತಿಷ್ಟು ಪರಿಹಾರ ನೀಡಬೇಕು ಎಂಬ ನಿಯಮವಿದೆ. ನಿಯಮದ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಪರಿಹಾರದ ಹಣ ಬಿಡುಗಡೆ ಮಾಡಿದ್ದರೂ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಮುಂದೆ ಸುಳ್ಳು ಹೇಳುತ್ತಿದೆ. ಮುಖ್ಯಮಂತ್ರಿ ಸೇರಿ ಎಲ್ಲ ಸಚಿವರು ಕಾಂಗ್ರೆಸ್ ಶಾಸಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಾಟಕವಾಡಿದ್ದಾರೆ ಇದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಪ್ರತಿಯೊಬ್ಬ ಮಹಿಳೆಗೆ ಮಾಸಿಕ ಒಂದು ಲಕ್ಷ ನೀಡಲಾಗುವುದು ಎಂಬ ಕಾಂಗ್ರೆಸ್ ಸುಳ್ಳು ಭರವಸೆ ನಿರ್ಲಕ್ಷಿಸಿರುವ ಜನ ಈ ಬಾರಿ ಬಿಜೆಪಿಯನ್ನು ಚುನಾಯಿಸಿದ್ದಾರೆ. ದೇಶದಲ್ಲಿ 10 ವರ್ಷದಲ್ಲಿ ನಡೆದ ಅಭಿವೃದ್ಧಿಯನ್ನು ಜನ ಮರೆತಿಲ್ಲ. ಎಲ್ಲೆಡೆ ಬಿಜೆಪಿಗೆ ಅಭೂತಪೂರ್ವ ಯಶಸ್ಸು ದೊರೆತಿದೆ. ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿಯಾಗಿರುವುದು ದೇಶಕ್ಕೆ ಸಂದ ಗೌರವವಾಗಿದೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ. ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ವೇತನ ನೀಡಲು ಹಣವಿಲ್ಲದೇ ಸರ್ಕಾರ ಕಂಗಲಾಗಿದ್ದು, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಬಜೆಟ್ನಲ್ಲಿ ಪ್ರಕಟಿಸಿದಂತೆ ಮುಂದುವರಿಯಲು ಸಂಪನ್ಮೂಲದ ಕೊರತೆಯಿದೆ. ಕ್ರಿಯಾಯೋಜನೆ ತಯಾರಿಸದೆ ಗ್ಯಾರೆಂಟಿ ಯೋಜನೆ ಜಾರಿಗೊಳಿಸಲಾಗಿದೆ. ಸರ್ಕಾರಕ್ಕೆ ಕ್ರೂಢೀಕರಣವಾದ ಎಲ್ಲ ಸಂಪನ್ಮೂಲವನ್ನು ಗ್ಯಾರಂಟಿ ಯೋಜನೆಗೆ ವ್ಯಯಿಸಲಾಗಿದೆ. ಇದರಿಂದ ರಾಜ್ಯದ ಜನ ಬೇಸತ್ತು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 76 ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಕಳೆದ ಒಂದು ವರ್ಷದಲ್ಲಿ ಒಂದು ಕೋಟಿ ರೂ.ಅನುದಾನ ಮಾತ್ರ ನೀಡಿದ್ದಾರೆ. ಉಳಿದ ಅನುದಾನ ನೀಡಲು ಖಜಾನೆಯಲ್ಲಿ ಹಣವಿಲ್ಲದೆ ಸರ್ಕಾರ ಬರಡಾಗಿದೆ ಎಂದು ಆರೋಪಿಸಿದರು.
ತಾಪಂ ಮಾಜಿ ಅಧ್ಯಕ್ಷ ಕೆ.ಸಿ.ರತನ್, ಬಿಜೆಪಿ ಮುಖಂಡ ಪರೀಕ್ಷಿತ್ ಜಾವಳಿ ಇದ್ದರು.