ಹನೂರಿನಲ್ಲಿ ಪ್ರಜಾಸೌಧ ನಿರ್ಮಾಣದ ಆಡಳಿತಾತ್ಮಕ ಅನುಮೋದನೆಯ ಆದೇಶದ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರಿಗೆ ನೀಡಿದರು. ಡಿಸಿಎಂ ಡಿ.ಕೆ. ಶಿವಕುಮಾರ್ ಇದ್ದರು. 
ಜಿಲ್ಲೆ

ಪ್ರಜಾಸೌಧಕ್ಕೆ ಆಡಳಿತಾತ್ಮಕ ಅನುಮೋದನೆ

ವಸಂತಕುಮಾರ್ ಬಿ

ಹನೂರು: ಪಟ್ಟಣ ವ್ಯಾಪ್ತಿಯಲ್ಲಿನ ಹುಲ್ಲೇಪುರದ ಬಳಿ ಹನೂರು ತಾಲೂಕು ಆಡಳಿತಕ್ಕಾಗಿ ಪ್ರಜಾಸೌಧ ನಿರ್ಮಾಣ ಸಂಬಂಧ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ಮಂಜೂರಾತಿ ಆದೇಶದ ಪ್ರತಿಯನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರಿಗೆ ನೀಡಿದರು.

ರಾಜ್ಯದಲ್ಲಿಯೇ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕಾಗಿದ್ದ ಕೊಳ್ಳೇಗಾಲಕ್ಕೆ ಈ ಹಿಂದೆ ಹನೂರು ಸೇರಿತ್ತು. ಸುಮಾರು 120 ಕಿ.ಮೀ.ಗೂ ಹೆಚ್ಚು ಅಂತರವನ್ನು ಹೊಂದಿರುವ ಗೋಪಿನಾಥಂ, ಪಾಲಾರ್ ಹಾಗೂ 50 ಕಿ.ಮೀ ದೂರವಿರುವ ಜಲ್ಲಿಪಾಳ್ಯ, ಗರಿಕೆಕಂಡಿ, ಹೂಗ್ಯಂ ಹಾಗೂ ಈ ಭಾಗದ ಇನ್ನಿತರ ದೂರದ ಕಾಡಂಚಿನ ಗ್ರಾಮಗಳ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಕೊಳ್ಳೇಗಾಲದ ಕಚೇರಿಗಳಿಗೆ ಅಲೆಯಬೇಕಿತ್ತು. ಇದರಿಂದ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರಲ್ಲಿ ಹನೂರನ್ನು ತಾಲೂಕಾಗಿ ರಚನೆ ಮಾಡಿದ್ದರು. ಆದರೆ ಇಲ್ಲಿ ವಿವಿಧ ಇಲಾಖೆಯ ಕಚೇರಿಗಳಿಲ್ಲ. ಕೆಲವೊಂದು ಕಚೇರಿಗಳು ಕೊಳ್ಳೇಗಾಲದಿಂದಲೇ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ಪ್ರಭಾರವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ಅಧಿಕಾರಿಗಳ ಕೆಲಸ ಕಾರ್ಯಗಳಿಗೆ ತೊಡುಕಾಗಿತ್ತು.

ಸಾರ್ವಜನಿಕರು ಹಾಗೂ ಪ್ರಗತಿಪರ ಸಂಘಟನೆಗಳು ಹನೂರಿನಲ್ಲಿ ತಾಲೂಕು ಕಚೇರಿಗಳಿಗಾಗಿ ಮಿನಿ ವಿಧಾನಸೌಧ ನಿರ್ಮಿಸುವಂತೆ ಹಲವು ವರ್ಷಗಳಿಂದಲೂ ಒತ್ತಾಯಿಸಿದ್ದರು. ಕಳೆದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹನೂರಿಗೆ ಪ್ರಜಾಸೌಧವನ್ನು ಘೋಷಿಸಿದ್ದರು. ಆದರೆ ಆಡಳಿತಾತ್ಮಕವಾಗಿ ಅನುಮೋದನೆಯಾಗಿರಲಿಲ್ಲ. ಆದರೆ ಪ್ರಜಾಸೌಧ ನಿರ್ಮಾಣಕ್ಕೆ ಜಾಗ ಗುರುತಿಸಿ ನಿಗದಿಪಡಿಸಿದ್ದ ಹುಲ್ಲೇಪುರದ ಸರ್ಕಾರಿ ಜಾಗದಲ್ಲಿ ಏ.25 ರಂದು ಅಧಿಕಾರಿಗಳ ತಂಡ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಸಿಎಂ ಸಿದ್ದರಾಮಯ್ಯ ಅವರ ಪ್ರವಾಸ ವೇಳಾಪಟ್ಟಿಯಲ್ಲೂ ಈ ಬಗ್ಗೆ ನಮೂದಾಗಿತ್ತು. ಅದರಂತೆಯೇ ಸಿಎಂ ಅವರು ಶಾಸಕ ಎಂ.ಆರ್ ಮಂಜುನಾಥ್ ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು. ಕಾರಿನಲ್ಲಿಯೇ ಕುಳಿತು ಟೆಂಡರ್ ಸಂಬಂಧ ಅಧಿಕಾರಿಗಳನ್ನು ವಿಚಾರಿಸಿದಾಗ ಆಡಳಿತಾತ್ಮಕ ಅನುಮೋದನೆ ಹಾಗೂ ಟೆಂಡರ್ ಆಗದಿರುವುದು ಗಮನಕ್ಕೆ ಬಂತು. ಟೆಂಡರ್ ಆಗದೇ ಶಂಕುಸ್ಥಾಪನೆ ನೆರವೇರಿಸುವುದು ಸರಿಯಲ್ಲ ಎಂದು ಸಿಎಂ ಅವರು ಅಧಿಕಾರಿಗಳಿಗೆ ತಿಳಿಸಿದ್ದರು.

ಇದರಿಂದ ಆಶಾ ಭಾವನೆಯನ್ನು ಹೊಂದಿದ್ದ ಕ್ಷೇತ್ರದ ಜನರಲ್ಲಿ ನಿರಾಸೆಯನ್ನು ಮೂಡಿಸಿ ಆಕ್ಷೇಪ ವ್ಯಕ್ತವಾಗಿತ್ತು. ಪ್ರಜಾಸೌಧ ಯಾವಾಗ ನಿರ್ಮಾಣ ಎಂಬುದಾಗಿ ಒತ್ತಾಯವೂ ಕೇಳಿ ಬಂದಿತ್ತು.

ಈ ಬಗ್ಗೆ ಮೇ 17ರ ವಿಜಯವಾಣಿ ಸಂಚಿಕೆಯಲ್ಲಿ ‘ಪ್ರಜಾಸೌಧ ನಿರ್ಮಾಣ ನನೆಗುದಿಗೆ’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಇದೀಗ ಪ್ರಜಾಸೌಧ ನಿರ್ಮಾಣದ ಕಟ್ಟಡವನ್ನು ಎ ಮಾದರಿಯಲ್ಲಿ 8.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಅಂದಾಜು ಪಟ್ಟಿ ಹಾಗೂ ನಕ್ಷೆಯನ್ನು ಸಲ್ಲಿಸಿ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ. ಇದರ ಪ್ರತಿಯನ್ನು ಸಿಎಂ ಅವರು ವಿಧಾನಸೌಧದಲ್ಲಿ ಆಯೋಜಿಸಿದ್ಧ ಸಭೆಯಲ್ಲಿ ಜಿಲ್ಲಾಧಿಕಾರಿ ಅವರಿಗೆ ನೀಡಿದ್ದಾರೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಜಾಸೌಧ ನಿರ್ಮಾಣದ ಕೆಲಸ ಕಾರ್ಯರೂಪಕ್ಕೆ ಬರಲಿದೆ.