ಜಿಲ್ಲೆ

ಮೈಸೂರಿನಲ್ಲಿ ಆದಿವಾಸಿ ನೃತ್ಯ ಮಹೋತ್ಸವಕ್ಕೆ ಚಾಲನೆ

ಮೈಸೂರು: ಕೇಂದ್ರ ಸಾಂಸ್ಕೃತಿಕ ಸಚಿವಾಲಯ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್, ಸಂಗೀತ ವಿಶ್ವ ವಿದ್ಯಾಲಯ ಹಾಗೂ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವ ಹಾಗೂ ವಿಶ್ವ ಆದಿವಾಸಿ ದಿನದ ಅಂಗವಾಗಿ 3 ದಿನಗಳ ಕಾಲ ನಗರದಲ್ಲಿ ಹಮ್ಮಿಕೊಂಡಿರುವ ಆದಿವಾಸಿ ನೃತ್ಯ ಮಹೋತ್ಸವಕ್ಕೆ ಮುಕ್ತ ವಿಶ್ವ ವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಸಂಭ್ರಮದ ಚಾಲನೆ ದೊರೆಯಿತು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಬುಡಕಟ್ಟು ಸಮುದಾಯದ ಕಲಾವಿದರು ಮುಕ್ತ ವಿವಿ ಆವರಣದಲ್ಲಿ ಸಾಂಸ್ಕೃತಿಕ ಮೆರವಣಿಗೆ ನಡೆಸುವ ಮೂಲಕ ಉತ್ಸವದ ಸಂಭ್ರಮ ಹೆಚ್ಚಿಸಿದರು. ಶಾಸಕ ಎಲ್. ನಾಗೇಂದ್ರ ಆದಿವಾಸಿ ನೃತ್ಯ ಮಹೋತ್ಸವಕ್ಕೆ ಚಾಲನೆ ನೀಡಿದರು.

ಆ. 10 ರಂದು ಬೆಳಗ್ಗೆ 11ಕ್ಕೆ ಸಂಗೀತ ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಸಂಜೆ 5.30ಕ್ಕೆ ರಂಗಾಯಣದ ಆವರಣದಲ್ಲಿ ಆದಿವಾಸಿ ನೃತ್ಯ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಆ.11ರಂದು ಸಂಜೆ 5.30ಕ್ಕೆ ಆದಿವಾಸಿ ಸಮರೋಪ ಸಮಾರಂಭ ರಂಗಾಯಣದ ಆವರಣದಲ್ಲಿ ನಡೆಯಲಿದೆ.

ಛತ್ತೀಸ್‌ಗಢದ ಅಬುಜ್ಮದೀಯ ನೃತ್ಯ, ಮಹಾರಾಷ್ಟ್ರದ ಬಂಜಾರ ನೃತ್ಯ, ಮಧ್ಯಪ್ರದೇಶದ ಶೈಲಾ ಕರ್ಮ ನೃತ್ಯ, ತೆಲಂಗಾಣದ ಮಾಥುರಿ ನೃತ್ಯ, ಕರ್ನಾಟಕದ ದಮಾಮಿ ಸಿದ್ಧಿ ನೃತ್ಯ, ಜೇನು ಕರುಬ ನೃತ್ಯ, ಡೊಳ್ಳು ಕುಣಿತ, ರಾಮನಗರದ ಪಾರ್ಥಸಾರತಿ ಜನಪದ ಕಲಾ ತಂಡದ ಕಲಾ ಪ್ರದರ್ಶನ ಗಮನ ಸೆಳೆಯಿತು.

ವೇದಿಕೆಯಲ್ಲಿ ಸಂಗೀತ ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಕಾರ್ಯಕ್ರಮ ಸಂಯೋಜಕ ಡಾ.ಕೆ. ವಸಂತಕುಮಾರ್, ಅಖಿಲ ಭಾರತ ಜನಪದ ಮತ್ತು ಬುಡಕಟ್ಟು ಪರಿಷತ್ ರಾಷ್ಟ್ರೀಯ ಅಧ್ಯಕ್ಷ ನಿರ್ಮಲ್ ವೈದ್ಯ ಹಾಗೂ ಇತರರು ಇದ್ದರು