ಜಿಲ್ಲೆ

ಆದಿವಾಸಿ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು

ಮೈಸೂರು: ಆದಿವಾಸಿ ಮಕ್ಕಳು ಶೈಕ್ಷಣಿಕವಾಗಿ ಸರ್ಕಾರದ ಸೌಲಭ್ಯ ಪಡೆದುಕೊಂಡು ವಿದ್ಯಾವಂತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್) ಸಂವಹನ ನ್ಯೂನತೆಗಳ ತಡೆಗಟ್ಟುವಿಕೆ ವಿಭಾಗದ ಮುಖ್ಯಸ್ಥ ಡಾ.ಎಂ.ಸಂದೀಪ್ ತಿಳಿಸಿದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ವಾಕ್ ಮತ್ತು ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಜನ ಜಾತೀಯ ಗೌರವ್ ದಿವಸದ ಅಂಗವಾಗಿ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿವಾಸಿ ನಾಯಕ ಬಿರ್ಸಾ ಮುಂಡಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
1875ರಲ್ಲಿ ಜನಿಸಿದ ಬಿರ್ಸಾಮುಂಡಾ ಅವರು ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದರು. ಬುಡಕಟ್ಟು ಸಮುದಾಯದ ಏಳಿಗೆಗಾಗಿ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿದಂತಹ ಅವರು ಆದರ್ಶ, ತತ್ವ ಹೋರಾಟದ ಗುಣಗಳನ್ನು ಪ್ರತಿಯೊಬ್ಬ ಆದಿವಾಸಿಗಳು ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿರುವ 21 ಆಶ್ರಮ ಶಾಲೆಗಳ ಮಕ್ಕಳಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಈ ದಿನ ಎಚ್.ಡಿ ಕೋಟೆ ತಾಲೂಕು ಡಿ.ಬಿ.ಕುಪ್ಪೆ ಆಶ್ರಮ ಶಾಲೆಯ 33 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾಗಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುವುದು. ಪಾಲಕರು ಮಕ್ಕಳ ವಾಕ್ ಮತ್ತು ಶ್ರವಣ ದೋಷದ ಬಗ್ಗೆ ಚಿಕ್ಕ ಮಕ್ಕಳಿದ್ದಾಗಲೇ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್, ವೈದ್ಯರಾದ ಡಾ.ಅಜೀಶ್ ಅಬ್ರಹಾಂ, ಡಾ. ರವೀಶ್‌ಗಣಿ, ಡಾ.ಮಹಾದೇವಪ್ಪ, ಡಾ.ಕೆ.ಅರುಣ್‌ರಾಜ್, ಡಾ.ಸಾರಾನ್ಸ್ ಜೈನ್ ಇತರರು ಇದ್ದರು.