ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅಧ್ಯಾತ್ಮವೇ ಭಾರತದ ಆತ್ಮವಾಗಿದ್ದು, ಪರಿಶುದ್ಧ ಭಕ್ತಿಯಿಂದ ದೇವರ ಸೇವೆ ಮಾಡಿದಾಗ ಸರ್ವಶಕ್ತನಾದ ಭಗವಂತನು ನಮ್ಮ ಎಲ್ಲ ಕಷ್ಟಗಳನ್ನು ಪರಿಹರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಹೇಳಿದರು.
ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಆದಿನಾಥಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಧರ್ಮದಲ್ಲಿ ಜೀವಿಸಿ, ಪರಧರ್ಮವನ್ನು ಪ್ರೀತಿಸುವ ಜೈನರು ಗುಣಗಳ ಆರಾಧಕರಾಗಿದ್ದು, ಸರ್ವಧರ್ಮೀಯರೊಂದಿಗೂ ಶಾಂತಿ-ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ ಎಂದರು.
ಪಡುಬಿದ್ರೆ ಬೀಡು ರತ್ನಾಕರ ರಾಜ್ ಅರಸು, ರಕ್ಷಿತ್ ಶಿವರಾಂ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಶುಭಹಾರೈಸಿದರು. ವಿಶಿಷ್ಟ ಸೇವೆ-ಸಾಧನೆ ಮಾಡಿದ ವೇಣೂರಿನ ಪ್ರವೀಣಕುಮಾರ್ ಇಂದ್ರ ಮತ್ತು ಉಜಿರೆಯ ಸುರೇಶ್‌ಕುಮಾರ್ ಅವರನ್ನು ಗೌರವಿಸಲಾಯಿತು. ಕಿಶೋರ್‌ಹೆಗ್ಡೆ ಎರ್ಮೆತ್ತೋಡಿಗುತ್ತು ಸ್ವಾಗತಿಸಿದರು. ಮುಂಡೂರುಗುತ್ತು ಆಕರ್ಷ್ ಜೈನ್ ಧನ್ಯವಾದವಿತ್ತರು. ಅಜಿತ್ ಕೊಕ್ರಾಡಿ ನಿರೂಪಿಸಿದರು.
ಪ್ರತಿಷ್ಠಾಚಾರ್ಯ ಬೆಳ್ತಂಗಡಿಯ ಕೆ.ಜಯರಾಜ ಇಂದ್ರ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಬಿ.ರಾಜಶೇಖರ ಅಜ್ರಿ, ಬಸದಿ ಸಮಿತಿಯ ಕೋಶಾಧಿಕಾರಿ ಚಾಮರಾಜ ಸೇಮಿತ, ವೃಷಭರಾಜ ಇಂದ್ರ, ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಹೇಮಾವತಿ ಹೆಗ್ಗಡೆಯವರು ಮತ್ತು ಡಿ.ಹಷೇರ್ಂದ್ರ ಕುಮಾರ್ ಉಪಸ್ಥಿತರಿದ್ದರು. ನಿರೀಕ್ಷಾ ಜೈನ್ ಹೊಸ್ಮಾರು ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಧಾರ್ಮಿಕ ವಿಧಿ-ವಿಧಾನಗಳು
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಪೂಜೆಯ ಸೇವಾಕರ್ತೃಗಳಾಗಿ ಭಾಗವಹಿಸಿದ್ದರು. ಭಗವಾನ್ ಆದಿನಾಥ ಸ್ವಾಮಿಯ ಪ್ರತಿಷ್ಠಾಪನೆ, ಶಿಖರಾರೋಹಣ, ಭಕ್ತಾಮರ ಆರಾಧನೆ, 108 ಕಲಶ ಅಭಿಷೇಕದ ಬಳಿಕ ಮಹಾಪೂಜೆ ನಡೆಯಿತು.