ಬೆಳ್ತಂಗಡಿ: ಕಳಿಯ ಗ್ರಾಮದ ಪರಪ್ಪು ಉದ್ಭವ ಶ್ರೀ ಆದಿ ಬ್ರಹ್ಮಲಿಂಗೇಶ್ವರ ಕ್ಷೇತ್ರ, ಮೂಡಾಯಿಪಲ್ಕೆಯಲ್ಲಿ ಡಿ.28ರಿಂದ 30ರ ವರೆಗೆ 7ನೇ ವರ್ಷದ ವಾರ್ಷಿಕ ಉತ್ಸವ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ, ಗಣಹೋಮ, ಭಜನೆ, ಭಕ್ತಿ ರಸಮಂಜರಿ, ದೈವಗಳಿಗೆ ಪರ್ವ, ಪೂರಕ ವಿಧಿವಿಧಾನದೊಂದಿಗೆ ದೈವೋತ್ಸವ ನಡೆಯಲಿದೆ ಎಂದು ಉದ್ಭವ ಶ್ರೀ ಆದಿಲಿಂಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ರುಕ್ಮಯ್ಯ ಎಂ. ಹೇಳಿದರು.
ಮಂಗಳವಾರ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ನಮ್ಮ ಕ್ಷೇತ್ರದಲ್ಲಿ, ದೈವೋತ್ಸವ ನಡೆಯುತ್ತಿದ್ದ ಸಂದರ್ಭ ಬೇರೆ ಸಮುದಾಯದ ಕೆಲವು ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ ತಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದು ದಾಂಧಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಿ ಅಹಿತಕರ ಘಟನೆ ನಡೆದಿತ್ತು. ಈ ಅಪಪ್ರಚಾರದಿಂದ ನಮ್ಮ ಕ್ಷೇತ್ರದ ಬಗ್ಗೆ ತಪ್ಪು ಕಲ್ಪನೆ ಮೂಡಿತ್ತು. ಈ ಬಗ್ಗೆ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿಗಳು ಅಶಾಂತಿ, ಅಹಿತಕರ ಘಟನೆ ನಡೆಸದಂತೆ, ಅಕ್ರಮವಾಗಿ ಕ್ಷೇತ್ರಕ್ಕೆ ಪ್ರವೇಶಿಸದಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದು, ಬೆಳ್ತಂಗಡಿ ನ್ಯಾಯಾಲಯದಿಂದ ಈ ಬಗ್ಗೆ ನಿರ್ಬಂಧಕಾಜ್ಞೆಯನ್ನು ತಂದಿದ್ದೇವೆ. ಸಾರ್ವಜನಿಕರು, ಭಕ್ತರು ಯಾವುದೇ ಅಪಪ್ರಚಾರ, ತಪ್ಪು ಅಭಿಪ್ರಾಯಗಳಿಂದ ಗೊಂದಲಕ್ಕೆ ಒಳಗಾಗಬಾರದು. ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಎಂದಿನಂತೆ ನಡೆಯಲಿದೆ ಎಂದರು. ಟ್ರಸ್ಟ್ ಕೋಶಾಧಿಕಾರಿ ರೇಖಾ, ಕಾನೂನು ಸಲಹೆಗಾರ ವಕೀಲ ಉದಯ ಬಿ.ಕೆ. ಉಪಸ್ಥಿತರಿದ್ದರು.