ತುಮಕೂರು: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶ ನೀಡಬೇಕು ಎಂದು ಆದಿಜಾಂಬವ ಮಹಾಮೈತ್ರಿ ಅಧ್ಯಕ್ಷ ನರಸೀಯಪ್ಪ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 5.50ಲಕ್ಷ ಮತದಾರರನ್ನು ಹೊಂದಿದ್ದರೂ ರಾಜಕೀಯವಾಗಿ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ ಎಂದು ಬೇಸರಿದರು.
ಜಿಲ್ಲೆಯ ಎರಡು ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದುವರೆಗೂ ಟಿಕೇಟ್ ನೀಡದೆ ನಿರ್ಲಕ್ಷ ಮಾಡುತ್ತಲೇ ಬಂದಿದೆ. ಪ್ರಸ್ತುತ ವಿಧಾನ ಪರಷತ್ ಹಾಗೂ ನಿಗಮ, ಮಂಡಳಿ ನೇಮಕದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಮಾದಿಗ ಸಮುದಾಯದ ವತಿಯಿಂದ ಜಿಲ್ಲೆಯ ಇಬ್ಬರು ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಿ, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಕರೆಯಿಸಿ, ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದು ತಳಿಸಿದರು.
ಕಾಂಗ್ರೆಸ್ ಮಾದಿಗ ಸಮುದಾಯದ ಮೇಲಿನ ನಿರ್ಲಕ್ಷ ಮುಂದುವರಿಸಿದರೆ ಮುಂಬರುವ ಜಿಪಂ, ತಾಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಿಲ್ಲೆಯ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಅರುಂಧತಿ, ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಮರಿಚನ್ನಮ್ಮ, ಶಿವಶಂಕರ್, ರಾಮಚಂದ್ರ, ಕೆ.ರಾಮಯ್ಯ, ಕೆ.ಎನ್.ಲಕ್ಷ್ಮೀರಂಗಯ್ಯ, ಜೆಸಿಬಿ ವೆಂಕಟೇಶ್, ಚಂದ್ರಶೇಖರ್,ಗೂಳರಿವೆ ನಾಗರಾಜು ಮತ್ತಿತರರು ಇದ್ದರು.
ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಪ್ರಾತಿನಿಧ್ಯ ಕೊಟ್ಟಿಲ್ಲ. ಪಕ್ಷಕ್ಕಾಗಿ ದುಡಿದವರಿಗೆ ವಿಧಾನಪರಿಷತ್,ನಿಗಮ, ಮಂಡಳಿ ನೇಮಕದಲ್ಲಿ
ಅವಕಾಶ ಕಲ್ಪಿಸಬೇಕು.
ಆರ್.ರಾಮಕೃಷ್ಣ
ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ