ಜಿಲ್ಲೆ

ಆ.2, 3ರಂದು ಅಂತಾರಾಷ್ಟ್ರೀಯ ಸಂಶೋಧನಾ ಸಮ್ಮೇಳನ: ಕಾಲೇಜಿನ ಡೀನ್ ಡಾ.ಪ್ರಶಾಂತ್ ಕಲ್ಲಪ್ಪ ಹೇಳಿಕೆ

ಮಂಡ್ಯ: ನಾಗಮಂಗಲ ತಾಲೂಕು ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆ.2 ಮತ್ತು 3ರಂದು ಅಂತಾರಾಷ್ಟ್ರೀಯ ಸಂಶೋಧನಾ ಸಮ್ಮೇಳನ ನಡೆಯಲಿದೆ ಎಂದು ಕಾಲೇಜಿನ ಡೀನ್ ಡಾ.ಪ್ರಶಾಂತ್ ಕಲ್ಲಪ್ಪ ತಿಳಿಸಿದರು.

ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ಆದಿಚುಂಚನಗಿರಿ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕ್ಯುಲರ್ ಮೆಡಿಸಿನ್, ಆದಿಚುಂಚನಗಿರಿ ವೈದ್ಯಕೀಯ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿರುವ ಸಮ್ಮೇಳನದಲ್ಲಿ ರಾಷ್ಟ್ರದ 15 ಕೇಂದ್ರಗಳಿಂದ ತಜ್ಞ ವೈದ್ಯರು ಆಗಮಿಸಲಿದ್ದಾರೆ. ಮೂವರು ಜಪಾನ್ ದೇಶದ ತಜ್ಞ ಸಂಶೋಧಕರು ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 18 ಜನ ಸಂಶೋಧಕರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

2ರಂದು ಬೆಳಗ್ಗೆ 9.30ಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿರುವ ಸಮ್ಮೇಳನದಲ್ಲಿ ಕೆಮಿಕಲ್ ಬಯೋಲಜಿ ಸೊಸೈಟಿ ಅಧ್ಯಕ್ಷ ಪ್ರೊ.ತೇಜ್‌ಪಾಲ್‌ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೆಮಿಕಲ್ ಬಯೋಲಜಿ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಪ್ರೊ.ಸಿದ್ದಾರ್ಥರಾಯ್, ಉಪಾಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ, ಮಾಜಿ ಅಧ್ಯಕ್ಷ ಪ್ರೊ.ತಪಸ್ ಕೆ.ಕುಂದು ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಆದಿಚುಂಚನಗಿರಿ ವಿವಿ ಉಪ ಕುಲಪತಿ ಪ್ರೊ.ಎಂ.ಎ. ಶೇಖರ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಸಂಶೋಧನೆಯಲ್ಲಿ ತೊಡಗಿಕೊಂಡಿರುವ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸಮ್ಮೇಳನಕ್ಕಾಗಿ ಆಗಮಿಸುವ ಎಲ್ಲರಿಗೂ ಊಟೋಪಚಾರ, ವಸತಿ ವ್ಯವಸ್ಥೆ ಮಾಡಲಾಗಿದೆ. ವಿಶ್ವವನ್ನು ಕಾಡುತ್ತಿರುವ ಕ್ಯಾನ್ಸರ್ ಬಗ್ಗೆಯೇ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿದ್ದು, ಈ ಬಗ್ಗೆಯೇ ಸಂಶೋಧಕರು ಸಹ ಉಪನ್ಯಾಸ ನೀಡುತ್ತಿರುವುದು ಸಹ ವಿಶೇಷವಾಗಿದೆ. ಸಮ್ಮೇಳನದಲ್ಲಿ ವಿಷಯಗಳ ವಿನಿಮಯದ ಜೊತೆಗೆ ಪಿಎಚ್‌ಡಿ ಸೇರಿದಂತೆ ಉನ್ನತ ಮಟ್ಟದ ಸಂಶೋಧನೆಗೂ ಇದರಿಂದ ಅನುಕೂಲವಾಗಲಿದೆ. ಉತ್ತಮ ಪ್ರಬಂಧ ಮಂಡಿಸುವ ಐವರಿಗೆ ಅಮೆರಿಕನ್ ಕೆಮಿಕಲ್ಸ್ ಸೊಸೈಟಿಯವರು ಸರ್ಟಿಫಿಕೇಟ್ ನೀಡಲಿದ್ದಾರೆ ಎಂದು ವಿವರಿಸಿದರು.

ಎಐಎಂಎ ನಿರ್ದೇಶಕ ಡಾ. ಶೋಭಿತ್ ರಂಗಪ್ಪ, ಡಾ.ಅನಿಲ್‌ಕುಮಾರ್ ಇದ್ದರು.