ಜಿಲ್ಲೆ

ಜುಲೈ ಅಂತ್ಯಕ್ಕೆ ರಾಜ್ಯಮಟ್ಟದ ಗಾಳಿಪಟ ಉತ್ಸವ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಮಂಡ್ಯ: ನಾಗಮಂಗಲ ತಾಲೂಕು ಆದಿಚುಂಚನಗಿರಿಯಲ್ಲಿ ಜುಲೈ ಅಂತ್ಯಕ್ಕೆ 33ನೇ ರಾಜ್ಯಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಳಿಪಟ ಗ್ರಾಮೀಣ ಹಾಗೂ ಹಳೆಯ ಕ್ರೀಡೆ. ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಭಾಗವಹಿಸುತ್ತಾರೆ. ಈ ಹಿನ್ನಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದು ಎಂದರು.

ಕರ್ನಾಟಕ ಜಾನಪದ ಪರಿಷತ್ ಹಾಗೂ ವಿವಿಧ ಸಂಘಟನೆಗಳ ಜತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಉತ್ಸವವನ್ನು ಉತ್ತಮವಾಗಿ ಜಿಲ್ಲೆಯಲ್ಲಿ ಸಂಘಟಿಸಲು ಅಧಿಕಾರಿಗಳು, ಜಾನಪದ ಪರಿಷತ್ ಹಾಗೂ ಸಂಘಟನೆಗಳ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು. ಮಾತ್ರವಲ್ಲದೆ ವೇದಿಕೆ, ಸ್ವಾಗತ, ವಸತಿ, ಆರೋಗ್ಯ, ಸಾಂಸ್ಕೃತಿಕ, ವಸ್ತುಪ್ರದರ್ಶನ, ಸಾರಿಗೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಮುಂದಿನ ಸಭೆಯಲ್ಲಿ ಸಮಿತಿಗಳೊಂದಿಗೆ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.

ಜಾನಪದ ಪರಿಷತ್ ಅಧ್ಯಕ್ಷ ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಗಾಳಿಪಟ ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹ ತುಂಬಿ ಗುರಿ ಮುಟ್ಟುವ ಪಾಠ ಹೇಳುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮನವಿ ಮಾಡಿದರು. ಈ ಹಿಂದಿನ ವರ್ಷದಲ್ಲಿ ಆಯೋಜಿಸಲಾಗಿದ್ದ ಉತ್ಸವ ಹಾಗೂ ಪರಿಷತ್ ವತಿಯಿಂದ ಸಾಮಾಜಿಕ ಸಂದೇಶಗಳುಳ್ಳ ಗಾಳಿಪಟವನ್ನು ಉತ್ಸವದಲ್ಲಿ ಹಾರಾಟ ಮಾಡುವ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಪರಿಷತ್‌ನ ಆಡಳಿತಾಧಿಕಾರಿ ಡಾ.ನಂದಕುಮಾರ್‌ಹೆಗ್ಡೆ, ಕ್ಯೂರೇಟರ್ ಡಾ.ರವಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಂಗಸ್ವಾಮಿ, ಡಿಡಿಪಿಯು ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ, ವಿವಿಧ ಸಂಘಟನೆ ಮುಖ್ಯಸ್ಥರಾದ ಕೀಲಾರ ಕೃಷ್ಣೇಗೌಡ, ದೇವರಾಜ್ ಕೊಪ್ಪ, ಕಾರಸವಾಡಿ ಮಹದೇವು, ಮಂಜೇಶ್, ಸಿದ್ದಲಿಂಗು ಹಾಜರಿದ್ದರು.